×
Ad

4700 ಕೋಟಿ ರೂ. ಸಾಲ ವಂಚನೆ ಹಗರಣ: ಸ್ಟರ್ಲಿಂಗ್ ಬಯೋಟೆಕ್‌ನ ಆಸ್ತಿ ಮುಟ್ಟುಗೋಲು

Update: 2018-06-01 21:23 IST

ಹೊಸದಿಲ್ಲಿ,ಜೂ.1: ಸಾಲ ವಂಚನೆ ಹಗರಣದಲ್ಲಿ ಸಿಲುಕಿರುವ ಗುಜರಾತ್‌ನ ಸ್ಟರ್ಲಿಂಗ್ ಬಯೋಟೆಕ್ ಉದ್ಯಮಸಮೂಹಕ್ಕೆ ಸೇರಿದ 4700 ಕೋಟಿ ರೂ. ಮೌಲ್ಯದ ಅಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.)ವು ಶುಕ್ರವಾರ ಮುಟ್ಟುಗೋಲು ಹಾಕಿದೆ.

  ಸಾಲವಂಚನೆ ಹಗರಣದಲ್ಲಿ ಸ್ಟರ್ಲಿಂಗ್ ಬಯೋಟೆಕ್ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಕಂಪೆನಿಯ ಆಸ್ತಿ ಮುಟ್ಟುಗೋಲು ಹಾಕಿದೆ.

ವಡೋದರಾದ ಸಂದೇಸಾರ ಕುಟುಂಬದ ಮಾಲಕತ್ವದ ಈ ಕಂಪೆನಿಯು ವಿವಿಧ ಬ್ಯಾಂಕ್‌ಗಳಿಂದ ಒಟ್ಟು 5363 ಕೋಟಿ ರೂ. ಸಾಲವನ್ನು ಮರುಪಾವತಿಸಿಲ್ಲ. ಈ ಸಾಲದ ಹೆಚ್ಚಿನ ಹಣವನ್ನು ಸಂದೇಸಾನ್ ಕುಟುಂಬಿಕರು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಸಾರ್ವಜನಿಕ ಇಲಾಖೆಗಳ ಅಧಿಕಾರಿಗಳಿಗೆ ಲಂಚ ನೀಡುವುದಕ್ಕಾಗಿಯೂ ಸಾಲದ ಹಣವನ್ನು ಬಳಸಿಕೊಳ್ಳಸಲಾಗಿದೆಯೆಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ಹಿರಿಯ ಕಾಂಗ್ರೆಸ್ ನಾಯಕನ ಹೆಸರನ್ನು ಕೂಡಾ ಪ್ರಕರಣದಲ್ಲಿ ಎಳೆದುತರಲಾಗಿದೆ. ಆದರೆ ಕಾಂಗ್ರೆಸ್ ನಾಯಕನು ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

  ಇ.ಡಿ. ಮುಟ್ಟುಗೋಲು ಹಾಕಿದ ಆಸ್ತಿಗಳಲ್ಲಿ ಸಂದೇಸಾನ್ ಕುಟುಂಬದ ಒಡೆತನಕ್ಕೆ ಸೇರಿದ ಫಾರ್ಮ್‌ಹೌಸ್‌ಗಳು, ಫ್ಯಾಕ್ಟರಿ ಆವರಣಗಳು ಹಾಗೂ ಗುಜರಾತ್ ಮತ್ತು ಮುಂಬೈನ ವಿವಿಧೆಡೆಯಿರುವ ಅಪಾರ್ಟ್‌ಮೆಂಟ್‌ಗಳು ಸೇರಿವೆ. ಇದರ ಜೊತೆಗೆ ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್‌ಗೆ ಸೇರಿದ ಕಾರ್ಖಾನೆ ಯಂತ್ರ, ವಿವಿಧ ಕಂಪೆನಿಗಳ 200ಕ್ಕೂ ಅಧಿಕ ಬ್ಯಾಂಕ್ ಖಾತೆಗಳು, 6.67 ಕೋಟಿ ರೂ. ಮೌಲ್ಯ ಶೇರುಗಳು ಹಾಗೂ ವಿಲಾಸಿ ಕಾರುಗಳು ಒಳಗೊಂಡಿವೆ.

ಈಗಾಗಲೇ ಇ.ಡಿ.ಯು ಸ್ಟರ್ಲಿಂಗ್ ಬಯೋಟೆಕ್‌ನ ಪ್ರವರ್ತಕರಾದ ನಿತಿನ್ ಸಂದೇಸಾ ಹಾಗೂ ಚೇತನ್ ಸಂದೇಸಾರ ಸೇರಿದಂತೆ ಉದ್ಯಮಸಮೂಹದ ಹಲವಾರು ವ್ಯಕ್ತಿಗಳ ವಿರುದ್ಧ ಜಾಮೀನುರಹಿತ ವಾರಂಟ್‌ಗಳನ್ನು ಜಾರಿಗೊಳಿಸಿದೆ. ಸಂದೇಸಾರ ಕುಟುಂಬಿಕರು ಭಾರತ ಹಾಗೂ ವಿದೇಶದಲ್ಲಿ 300ಕ್ಕೂ ಅಧಿಕ ಬೇನಾಮಿ ಹಾಗೂ ನಕಲಿ ಕಂಪೆನಿಗಳನ್ನು ಸ್ಥಾಪಿಸಿದ್ದರೆಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News