ಚುನಾವಣಾ ಅವ್ಯವಹಾರಗಳ ಮಾಹಿತಿ ನೀಡುವವರ ಗುರುತು ರಕ್ಷಣೆ: ಸಿಇಸಿ

Update: 2018-06-02 14:31 GMT

ಕೋಲ್ಕತಾ,ಜೂ.2: ಚುನಾವಣಾ ಆಯೋಗದ ಮೊಬೈಲ್ ಆ್ಯಪ್ ಮೂಲಕ ಚುನಾವಣಾ ಅವ್ಯವಹಾರಗಳನ್ನು ಬಯಲಿಗೆಳೆಯುವವರ ಗುರುತನ್ನು ಗೋಪ್ಯವಾಗಿರಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಒ.ಪಿ.ರಾವತ್ ಅವರು ಶನಿವಾರ ಭರವಸೆ ನೀಡಿದರು.

ಇತ್ತೀಚಿನ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭ ಪ್ರಾಯೋಗಿಕ ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ ಈ ಆ್ಯಪ್ ಚುನಾವಣಾ ಅವ್ಯವಹಾರಗಳ ಕುರಿತು 780 ವೀಡಿಯೊ ದೂರುಗಳನ್ನು ಸ್ವೀಕರಿಸಿತ್ತು ಎಂದು ಇಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ ಅವರು,ಆಯೋಗಕ್ಕೆ ಇಂತಹ ವೀಡಿಯೊಗಳನ್ನು ಕಳುಹಿಸುವವರ ಗುರುತನ್ನು ಬಹಿರಂಗಗೊಳಿಸದಿರಲು ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.

ಆಯೋಗವು ವೀಡಿಯೊಗಳನ್ನು ಕಳುಹಿಸಿದ ಸ್ಥಳದ ಅಕ್ಷಾಂಶ ಮತ್ತು ರೇಖಾಂಶಗಳನ್ನು ಖಚಿತಪಡಿಸಿಕೊಂಡು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ. ಇನ್ನು ಮುಂದೆ ಪ್ರತಿ ಚುನಾವಣೆಯಲ್ಲಿಯೂ ಈ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ ಎಂದರು.

ಇವಿಎಂಗಳನ್ನು ತಿರುಚಲಾಗುತ್ತಿದೆ ಎಂಬ ರಾಜಕೀಯ ಪಕ್ಷಗಳ ದೂರುಗಳ ಕುರಿತಂತೆ ಅವರು,ವ್ಯವಸ್ಥೆಯ ಪ್ರಾಮಾಣಿಕತೆಯನ್ನು ಶಂಕಿಸಲು ಯಾವುದೇ ಕಾರಣಗಳಿಲ್ಲ. ಇಂತಹ ಆರೋಪಗಳು ಆಯೋಗವನ್ನು ಬಲಿಪಶುವನ್ನಾಗಿಸುವ ರಾಜಕೀಯ ಪಕ್ಷಗಳ ಪ್ರಯತ್ನವಷ್ಟೇ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾವತ್,ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆಗಳನ್ನು ನಡೆಸಲು ಸಂವಿಧಾನ ಮತ್ತು ಕಾನೂನಿನಲ್ಲಿ ಬದಲಾವಣೆಗಳು ಅಗತ್ಯವಾಗಿದ್ದು,ಇದನ್ನು ಸರಕಾರಕ್ಕೆ ತಿಳಿಸಲಾಗಿದೆ ಎಂದರು. ಸದನದ ಅವಧಿಯು ಅಂತ್ಯಗೊಳ್ಳುವ ಆರು ತಿಂಗಳ ಮೊದಲು ಯಾವುದೇ ಅಧಿಸೂಚನೆಯನ್ನು ಆಯೋಗವು ಹೊರಡಿಸುವಂತಿಲ್ಲ ಎಂದು ಅವರು ತಿಳಿಸಿದರು.

 ಕೇಂಬ್ರಿಡ್ಜ್ ಅನಲಿಟಿಕಾ ಪ್ರಕರಣದಲ್ಲಿ ಆದಂತೆ ದತ್ತಾಂಶಗಳ ಸೋರಿಕೆಯನ್ನು ತಡೆಯಲು ಸಾಮಾಜಿಕ ಮಾಧ್ಯಮಗಳಿಗಾಗಿ ನೀತಿ ಸಂಹಿತೆಯೊಂದನ್ನು ಆಯೋಗವು ರೂಪಿಸುತ್ತಿದೆ ಎಂದ ಅವರು,ಸಕ್ರಿಯವಾಗಿಲ್ಲದ ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಆಯೋಗವು ಆರಂಭಿಸಿದ್ದು,ಈವರೆಗೆ 1,000 ಪಕ್ಷಗಳನ್ನು ಪಟ್ಟಿಯಿಂದ ಹೊರಗಿರಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News