ಮಹಾರಾಷ್ಟ್ರಕ್ಕೆ ರೈತಮುಷ್ಕರದ ಬಿಸಿ
ಮುಂಬೈ,ಜೂ.2: ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರವು ರೈತ ಸಾಲಮನ್ನಾ ಮಾಡಲು ಕಾರಣವಾದ ಕಳೆದ ವರ್ಷದ ಅಭೂತಪೂರ್ವ ರೈತ ಮುಷ್ಕರದ ಪ್ರಥಮ ವರ್ಷಾಚರಣೆಯ ದಿನವಾದ ಶುಕ್ರವಾರದಂದೆ, ರೈತ ಸಂಘಟನೆಯಾದ ರಾಷ್ಟ್ರೀಯ ಕಿಸಾನ್ ಮಹಾಸಂಘ(ಆರ್.ಕೆ.ಎಂ.)ವು ಹತ್ತು ದಿನಗಳ ರೈತ ಮುಷ್ಕರಕ್ಕೆ ಕರೆ ನೀಡಿದ್ದು, ಎರಡನೆ ದಿನವಾದ ಶನಿವಾರ ರಾಜ್ಯದಾದ್ಯಂತ ತರಕಾರಿ ಹಾಗೂ ಹಾಲುಪೂರೈಕೆಯಲ್ಲಿ ಭಾರೀ ವ್ಯತ್ಯಯವುಂಟಾಗಿದೆ.
ಸಂಪೂರ್ಣವಾಗಿ ರೈತ ಸಾಲ ಮನ್ನಾ ಹಾಗೂ ಬೆಳೆಗಳಿಗೆ ಹೆಚ್ಚಿನ ಬೆಂಬಲ ಬೆಲೆ ನೀಡಬೇಕೆಂಬ ಬೇಡಿಕೆಗಳು ಸೇರಿದಂತೆ, ಭಾರತದ ಕೃಷಿಕರು ಎದುರಿಸುತ್ತಿರು ಸಮಸ್ಯೆಗಳ ಬಗ್ಗೆ ಸರಕಾರದ ಗಮನಸೆಳೆಯಲು ದೇಶಾದ್ಯಂತದ 130 ನಗರಗಳಲ್ಲಿ ರೈತರು ಶುಕ್ರವಾರದಂದು 10 ದಿನಗಳ ಮುಷ್ಕರವನ್ನು ಆರಂಭಿಸಿದ್ದಾರೆ.
ಈ ಪ್ರತಿಭಟನೆಯ ಭಾಗವಾಗಿ ರಾಷ್ಟ್ರೀಯ ಕಿಸಾನ್ ಮೋರ್ಚಾದ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಪುಣೆ-ಬೆಂಗಳೂರು ಹೆದ್ದಾರಿ, ಪುಣೆ-ನಾಶಿಕ್ ಹೆದ್ದಾರಿ, ಖೇಡ್-ಶಿವಪುರ, ಇಂದಾಪುರ್, ಪುಣೆ ಜಿಲ್ಲೆಯ ಶಿರೂರ್, ಸತಾರದ ಕರಾಡ್, ಸೋಲಾಪುರದ ಪಂಢರಾಪುರ, ಅಹ್ಮದ್‌ನಗರದ ಸಂಗಮನೇರ್, ನಾಶಿಕ್, ಹಾಗೂ ನಾಶಿಕ್ ಜಿಲ್ಲೆಯ ಯೆಯೊಲಾ, ಪರ್ಭಾನಿ ಹಾಗೂ ಔರಂಗಬಾದ್ ಜಿಲ್ಲೆಗಳಲ್ಲಿ ರಾಸ್ತಾ ರೋಖೋ ನಡೆಸಿ, ತರಕಾರಿ, ಹಣ್ಣುಹಂಪಲು ಹಾಗೂ ಹಾಲು ಸೇರಿದಂತೆ ಅಗತ್ಯ ಸಾಮಾಗ್ರಿಗಳ ಪೂರೈಕೆಗೆ ತಡೆಯೊಡ್ಡಲು ಯತ್ನಿಸಿದ್ದಾರೆ.
ಮುಷ್ಕರದ ಮೊದಲ ದಿನವಾದ ಶುಕ್ರವಾರ ಹಲವಾರು ರೈತ ಸಂಘಟನೆಗಳು ಮುಷ್ಕರದಿಂದ ದೂರವುಳಿದಿದ್ದವು. ಆದಾಗ್ಯೂ, ಒಂದು ವೇಳೆ ಮುಷ್ಕರವು ಮುಂದುವರಿದಲ್ಲಿ, ಮುಂದಿನ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರವು ಅಗತ್ಯ ಸಾಮಾಗ್ರಿಗಳ ಕೊರತೆಯನ್ನೆದುರಿಸುವ ಸಾಧ್ಯತೆಯಿದೆ.
ರಖಂ ಮಾರುಕಟ್ಟೆಗಳಿಗೆ ಮುಷ್ಕರದ ಬಿಸಿ ತಟ್ಟುವಂತೆ ಮಾಡಲು ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಕೃಷ್ಯುತ್ಪನ್ನ ಮಾರುಕಟ್ಟೆಗಳಿಗೆ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಆರ್‌ಕೆಎಂ ರೈತರಿಗೆ ಕರೆ ನೀಡಿದೆ.
ನಮ್ಮ ಬೇಡಿಕೆಗಳು ಈಡೇರುವ ತನಕ, ಕೃಷ್ಯುತ್ಪನ್ನಗಳ ಪೂರೈಕೆಗೆ ತಡೆಯೊಡ್ಡುವುದಾಗಿ ಆರ್‌ಕೆಎಂನ ಕೋರ್ ಸಮಿತಿ ಸದಸ್ಯ ಸಂದೀಪ್ ಗಿಡ್ಡೆ ಪಾಟೀಲ್ ತಿಳಿಸಿದ್ದಾರೆ.
ಶನಿವಾರದಿಂದ ಹೆಚ್ಚಿನ ಸಂಖ್ಯೆಯ ರೈತರು ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿರುವುದಾಗಿ ಆರ್.ಕೆ.ಎಂ. ತಿಳಿಸಿದೆ. ಈ ಮಧ್ಯೆ ಎಡಪಂಥೀಯ ರೈತ ಸಂಘಟನೆಯಾದ ಅಖಿಲ ಭಾರತೀಯ ಕಿಸಾನ್ ಸಭಾ ಕೂಡಾ ಇದೇ ಬೇಡಿಕೆಗಳನ್ನು ಮುಂದಿಟ್ಟುಶುಕ್ರವಾರ ರಾಜ್ಯದಾದ್ಯಂತ ತಹಶೀಲ್ದಾರ್ ಕಚೇರಿಗಳ ಮುಂದೆ ಧರಣಿ ನಡೆಸಿದೆ.
ನಾಶಿಕ್‌ನಲ್ಲಿ ಹಾಲು,ತರಕಾರಿ ಪೂರೈಕೆ ಬಾಧಿತ
ರಾಷ್ಟ್ರವ್ಯಾಪಿಯಾಗಿ ರೈತರು ಶುಕ್ರವಾ ಆರಂಭಿಸಿರುವ ಹತ್ತು ದಿನಗಳ ಮುಷ್ಕರವು ಶನಿವಾರ ಎರಡನೆ ದಿನಕ್ಕೆ ಕಾಲಿಟ್ಟಿದ್ದು,ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಮಾರುಕಟ್ಟೆಗೆ ತರಕಾರಿಗಳ ಪೂರೈಕೆ ಹಾಗೂ ಹಾಲುಗಳ ಸಂಗ್ರಹಣೆ ಬಾಧಿತವಾಗಿದೆಯೆಂದು ಅಖಿಲ ಭಾರತ ಕಿಸಾನ್ ಮಹಾಸಭಾದ ಕಾರ್ಯಕಾರಿ ಅಧ್ಯಕ್ಷಕ ರಾಜು ದೇಸಾಲೆ ತಿಳಿಸಿದ್ದಾರೆ.
ನಾಶಿಕ್‌ನ ಯೆಯೊಲಾ ತಾಲ್ಲೂಕಿನ ವಿಲಾಸ್‌ಪುರ್‌ನಲ್ಲಿ ಪ್ರತಿಭಟನಾ ನಿರತ ರೈತರ ರಸ್ತೆಗಳಿಗೆ ಹಾಲು ಚೆಲ್ಲಿದ್ದಾರೆ ಹಾಗೂ ಜಿಲ್ಲೆಯ ಎಲ್ಲಾ ಹಾಲಿನ ಡೇರಿಗಳು ಮುಚ್ಚಲ್ಪಟ್ಟಿವೆ ಹಾಗೂ ಹಾಲು ಸಂಗ್ರಹ ಕೇಂದ್ರದ ಚಟುವಟಿಕೆಯೂ ಬಾಧಿತವಾಗಿದೆಯೆಂದುಸ ಅವರು ಹೇಳಿದ್ದಾರೆ.