ಯುವಕನಿಂದ ಬಾಲಕಿಯ ಮೇಲೆ ಅತ್ಯಾಚಾರ, ತಂದೆಯ ಕಡಿದುಕೊಲೆ
ಭುವನೇಶ್ವರ, ಜೂ.2: ಒಡಿಶಾದ ಬರ್ಗಾ ಜಿಲ್ಲೆಯಲ್ಲಿ ಶನಿವಾರ ನಡೆದ ಬರ್ಬರ ಘಟನೆಯೊಂದರಲ್ಲಿ ಯುವಕನೊಬ್ಬ, ಶಾಲಾ ಶಿಕ್ಷಕರೊಬ್ಬರ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ತಂದೆಯನ್ನು ಹತ್ಯೆಗೈದಿದ್ದಾನೆಂದುಆರೋಪಿಸಲಾಗಿದೆ. ಅತ್ಯಾಚಾರದ ಬಳಿಕ ಆರೋಪಿಯು ಬಾಲಕಿಯನ್ನು ಮಾರಾಕಾಯುಧದಿಂದ ಹೊಡೆದ ಕಾರಣ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಶಿಕ್ಷಕ ಒಡಿಶಾದ ಖಾರಿಪಲ್ಲಿ ಶಾಲೆಯಲ್ಲಿ ಸಂಪನ್ಮೂಲಗಳ ಸಮನ್ವಯಕಾರನಾಗಿ ಕೆಲಸ ಮಾಡುತ್ತಿದ್ದರು. ಅವರು ಹಾಗೂ ಅವರ 15 ವರ್ಷದ ಪುತ್ರಿ, ಮನೆಯಲ್ಲಿ ಮಲಗಿದ್ದಾಗ ನಾಗೇನ್ ದಾಸ್ ಎಂಬ 21 ವರ್ಷದ ಯುವಕ ನಸುಕಿನಲ್ಲಿ 2:00 ಗಟೆಯ ವೇಳೆಗೆ ಒಳಗೆ ನುಗ್ಗಿದ್ದು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆನ್ನಲಾಗಿದೆ.
ಪುತ್ರಿಯ ಆಕ್ರಂಧನ ಕೇಳಿ ಶಿಕ್ಷಕ ಎಚ್ಚರಗೊಂಡಾಗ, ದಾಸ್ ಅವರನ್ನು ಮಾರಕಾಯುಧದಿಂದ ಕಡಿದು ಕೊಂದನೆನ್ನಲಾಗಿದೆ. ಆನಂತರ ದಾಸ್, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನೂ ಕಡಿದು, ಗಂಭೀರವಾಗಿ ಗಾಯಗೊಳಿಸಿದ್ದಾನೆ. ಗಾಯಾಳು ಬಾಲಕಿಯನ್ನು ಬರ್ಗಾರ್ ಜಿಲ್ಲಾ ಮುಖ್ಯಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆಯ ದೇಹಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಬುರ್ಲಾ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯ ಬಳಿಕ ಆರೋಪಿ ಯುವಕನು ಶರಣಾಗತನಾಗಿದ್ದು, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅಪ್ರಾಪ್ತ ಬಾಲಕಿಯು ಇನ್ನೂ ತುರ್ತುಚಿಕಿತ್ಸಾ ವಿಭಾಗದಲ್ಲಿರುವುದರಿಂದ ಆಕೆಯಿಂದ ಇನ್ನಷ್ಟೇ ಹೇಳಿಕೆಗಳನ್ನು ಪಡೆಯಬೇಕಾಗಿದೆಯೆಂದು ಅವರು ಹೇಳಿದ್ದಾರೆ.