×
Ad

ಯುಎಇಗೆ ಪ್ರಯಾಣಿಸುವ ಅಪ್ರಾಪ್ತ ವಯಸ್ಕರಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ

Update: 2018-06-02 21:20 IST

ಮುಂಬೈ, ಜೂ.2: ಇನ್ನುಮುಂದೆ ಅಪ್ರಾಪ್ತ ವಯಸ್ಕರು, ಭಾರತದಿಂದ ಯುಎಇಗೆ ಪ್ರಯಾಣಿಸುವ ತಮ್ಮ ಪಾಲಕರು ಅಥವಾ ಪೋಷಕರಿಂದ ಅಧಿಕೃತ ಅನುಮತಿ ಪತ್ರವನ್ನು ಹೊಂದಿರಬೇಕಾಗುತ್ತದೆ. ಕೇವಲ ವಿಮಾನಯಾನದ ವೇಳೆ ಮಾತ್ರವಲ್ಲ ಪಾಲಕರು, ಪೋಷಕರುನ್ನು ಹೊರತುಪಡಿಸಿ, ಬೇರೊಬ್ಬ ಕುಟುಂಬ ಸದಸ್ಯನ ಜೊತೆ ಪ್ರಯಾಣಿಸುವಾಗಲೂ ಅವರು ಈ ಪ್ರಮಾಣಪತ್ರವನ್ನು ಹೊಂದಿರಬೇಕಾಗುತ್ತದೆಯೆಂದು ಏರ್‌ಇಂಡಿಯಾದ ಪ್ರಕಟಣೆ ತಿಳಿಸಿದೆ.

ಯುಎಇನಲ್ಲಿ ಮಕ್ಕಳ ಕಳ್ಳಸಾಗಣೆಯನ್ನು ತಡೆಗಟ್ಟುವ ಉದ್ದೇಶದಿಂದ ದುಬೈ ವಲಸೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯು, ಸೂಚನಾ ಪತ್ರವೊಂದನ್ನು ಜಾರಿಗೊಳಿಸಿದ ಕೆಲವೇ ದಿನಗಳ ಬಳಿಕ ಈ ನೂತನ ನಿಯಮ ಜಾರಿಗೆ ಬಂದಿದೆ.

ಸೂಕ್ತವಾದ ಪರವಾನಗಿ ಪತ್ರವನ್ನು ಹೊಂದಿರದೆ ಯುಎಇಗೆ ಪ್ರಯಾಣಿಸುವ ಯಾವುದೇ ಅಪ್ರಾಪ್ತ ವಯಸ್ಕರನ್ನು ತಕ್ಷಣವೇ ವಾಪಸ್ ಕಳುಹಿಸಲಾಗುವುದೆಂದು ಸೂಚನಾಪತ್ರದಲ್ಲಿ ತಿಳಿಸಲಾಗಿತ್ತು.

 ಯುಎಇಗೆ ಮಕ್ಕಳು ಹಾಗೂ ಅಪ್ರಾಪ್ತ ವಯಸ್ಕರ ಪ್ರಯಾಣಕ್ಕೆ ಸಂಬಂಧಿಸಿದ ನೂತನ ವಿಧಿವಿಧಾನಗಳ ಕುರಿತು ದುಬೈನ ವಾಸ್ತವ್ಯ ಹಾಗೂ ವಿದೇಶಾಂಗ ವ್ಯವಹಾರಗಳ ಮಹಾನಿರ್ದೇಶನಾಲಯವು ಜೂನ್ 1ರಿಂದ ಅನ್ವಯವಾಗುವಂತೆ ಅಧಿಸೂಚನೆಯೊಂದನ್ನು ಹೊರಡಿಸಿತ್ತು.

ಈ ಹೊಸ ನಿರ್ಬಂಧಗಳನ್ನು ವಿಧಿಸಿರುವುದಕ್ಕೆ ದುಬೈನ ಅಧಿಕಾರಿಗಳು ಯಾವುದೇ ಕಾರಣಗಳನ್ನು ನೀಡಿಲ್ಲವಾದರೂ, ಈ ಹಿಂದೆಯೂ ಅಮೆರಿಕ ವಿದೇಶಾಂಗ ಇಲಾಖೆಯು, ಗಲ್ಫ್ ರಾಜ್ಯಗಳಲ್ಲಿ ಒಂಟೆ ಓಟದ ಉದ್ಯಮದಲ್ಲಿ ಅಪ್ರಾಪ್ತ ವಯಸ್ಕರನ್ನು ಜಾಕಿಗಳಾಗಿ ಬಳಸಲಾಗುತ್ತಿದೆಯೆಂದು ತಿಳಿಸಿತ್ತು.

ಈ ಮಕ್ಕಳು ಹೆಚ್ಚು ದೇಹತೂಕವನ್ನು ಪಡೆಯುವುದನ್ನು ತಪ್ಪಿಸಲು ಅವರನ್ನು ಅರೆಹೊಟ್ಟೆಯಲ್ಲಿರಿಸಲಾಗುತ್ತಿತ್ತು. ಇದರಿಂದಾಗಿ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕುಂಠಿತಗೊಂಡ ಅನೇಕ ಪ್ರಕರಣಗಳನ್ನು ಕೂಡಾ ಅದು ವರದಿ ಮಾಡಿತ್ತು.

  ಆ ಬಳಿಕ ಏರ್ ಇಂಡಿಯಾವು ಇಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಯಾಣ ಅವಶ್ಯಕತೆಗಳಿಗೆ ಸಂಬಂಧಿಸಿ ಅಪ್‌ಲೋಡ್ ಮಾಡಿದ ವಿವರಗಳಲ್ಲಿ ಯುಎಇಗೆ ಪ್ರಯಾಣಿಸುವ 18 ವರ್ಷಕ್ಕಿಂತ ಕೆಳಗಿನ ಅಪ್ರಾಪ್ತ ವಯಸ್ಕರು ಕಡ್ಡಾಯವಾಗಿ ತಮ್ಮ ಪಾಲಕರು ಅಥವಾ ಪೋಷಕರಿಂದ ಕಡ್ಡಾಯವಾಗಿ ಅನುಮತಿ ಪತ್ರವನ್ನು ತಮ್ಮಾಂದಿಗೆ ಒಯ್ಯಬೇಕೆಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News