ಗೋಲಿಬಾರ್‌ಗೆ ಆದೇಶ ನೀಡಿದವರು ಯಾರು? : ತಮಿಳುನಾಡು ಸರಕಾರವನ್ನು ಪ್ರಶ್ನಿಸಿದ ಮದ್ರಾಸ್ ಹೈಕೋರ್ಟ್

Update: 2018-06-02 15:53 GMT

ಚೆನ್ನೈ, ಜೂ. 2: ತೂತುಕುಡಿಯಲ್ಲಿ ಸರ್ಲೈಟ್ ಘಟಕದ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ಗೋಲಿಬಾರ್ ನಡೆಸಲು ಕಾರಣವಾದ ಸನ್ನಿವೇಶದ ಬಗ್ಗೆ ವಿವರಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠ ತಮಿಳುನಾಡು ಸರಕಾರಕ್ಕೆ ಶುಕ್ರವಾರ ಸೂಚಿಸಿದೆ. ಗೋಲಿಬಾರ್ ನಡೆಸಲು ಯಾರು ಆದೇಶ ನೀಡಿದರು ಹಾಗೂ ಗೋಲಿಬಾರ್‌ನ ಸಂದರ್ಭ ಗುಣಮಟ್ಟದ ಕಾರ್ಯಾಚರಣೆ ಪ್ರಕ್ರಿಯೆಯನ್ನು ಅನುಸರಿಸಲಾಗಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಜೂನ್ 6ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಪೀಠ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ. ಅಲ್ಲದೆ, ಜಿಲ್ಲಾಧಿಕಾರಿ ಕಚೇರಿ ಆವರಣದ ಒಳಗೆ ಅಳವಡಿಸಲಾದ ಸಿಸಿಟಿವಿ ಕೆಮರಾ ಯಾಕೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪೀಠ ಪ್ರಶ್ನಿಸಿದೆ. ತೂತುಕುಡಿ ನಿವಾಸಿಗಳು ಸಲ್ಲಿಸಿದ ದೂರಿನ ವಿಚಾರಣೆಯನ್ನು ನ್ಯಾಯಮೂರ್ತಿ ಮುರಳೀಧರನ್ ಹಾಗೂ ಕೃಷ್ಣವಲ್ಲಿ ಅವರನ್ನು ಒಳಗೊಂಡ ಪೀಠ ನಡೆಸಿತು. ಮೇಲ್ನೋಟದ ಯಾವುದೇ ಪುರಾವೆಗಳು ಇಲ್ಲದೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾರ್ವಜನಿಕರನ್ನು ಬಂಧಿಸದಿರುವಂತೆ ಪೀಠ ರಾಜ್ಯ ಪೊಲೀಸರಿಗೆ ನಿರ್ದೇಶಿಸಿದೆ. ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಆರಂಭದಲ್ಲಿ 10 ಲಕ್ಷ ರೂ. ಘೋಷಿಸಿದ್ದು, ಅನಂತರ ಅದನ್ನು 20 ಲಕ್ಷ ರೂ.ಗೆ ದ್ವಿಗುಣಗೊಳಿಸಿದ್ದಾರೆ. ಈ ಪರಿಹಾರ ಧನವನ್ನು ಮರು ಪರಿಶೀಲಿಸುವಂತೆ ದೂರುದಾರರಾದ ಕಂಧು ಕುಮಾರ್ ಹಾಗೂ ಮುತ್ತು ಅಮುಧನಾಥನ್ ಆಗ್ರಹಿಸಿದ್ದಾರೆ.

ಗೋಲಿಬಾರ್‌ನಿಂದ ಗಂಭೀರವಾಗಿ ಗಾಯಗೊಂಡವರಿಗೆ ಪರಿಹಾರ ಧನವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಅಲ್ಪಸ್ವಲ್ಪ ಗಾಯಗೊಂಡರಿಗೆ ಪರಿಹಾರ ಧನವನ್ನು 1 ಲಕ್ಷ ರೂ.ನಿಂದ 1.50 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಈಗ ಮೃತಪಟ್ಟವರಿಗೆ 50 ಲಕ್ಷ ರೂ. ಹಾಗೂ ಗಂಭೀರ ಗಾಯಗೊಂಡವರಿಗೆ 20 ಲಕ್ಷ ರೂ. ಪರಿಹಾರ ಧನ ನೀಡುವಂತೆ ದೂರುದಾರರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News