ಮಕ್ಕಾ ಮಸೀದಿ ಸ್ಫೋಟ ಪ್ರಕರಣ: ವಿವಾದಗಳ ನಡುವೆ ನ್ಯಾಯಮೂರ್ತಿ ಸ್ವಯಂ ನಿವೃತ್ತಿ ಮನವಿ ಸ್ವೀಕಾರ

Update: 2018-06-02 17:18 GMT

ಹೊಸದಿಲ್ಲಿ, ಜೂ. 2: ವಿವಾದಾತ್ಮಕ ನಡೆಯೊಂದರಲ್ಲಿ ತನ್ನ ಹುದ್ದೆಯಿಂದ ಸ್ವಯಂ ನಿವೃತ್ತಿ ಕೋರಿ ಎನ್‌ಐಎಯ ವಿಶೇಷ ನ್ಯಾಯಮೂರ್ತಿ ಹಾಗೂ ನಾಲ್ಕನೇ ಹೆಚ್ಚುವರಿ ಮೆಟ್ರೋಪಾಲಿಟಿನ್ ಸೆಷನ್ಸ್ ನ್ಯಾಯಮೂರ್ತಿ ಕೆ. ರವಿಂದರ್ ರೆಡ್ಡಿ ಅವರು ಸಲ್ಲಿಸಿದ ಮನವಿಯನ್ನು ಹೈದರಾಬಾದ್ ಉಚ್ಚ ನ್ಯಾಯಾಲಯ ಶುಕ್ರವಾರ ಸ್ವೀಕರಿಸಿದೆ.

ನಗರ ನಾಗರಿಕ ನ್ಯಾಯಾಲಯದ 22ನೇ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿಗೆ ಕರ್ತವ್ಯ ಹಸ್ತಾಂತರಿಸುವಂತೆ ಹೈದರಾಬಾದ್ ಉಚ್ಚ ನ್ಯಾಯಾಲಯ ಕೆ. ರವಿಂದರ್ ರೆಡ್ಡಿಗೆ ಸೂಚಿಸಿದೆ. 2008ರ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಾಮಿ ಅಸೀಮಾನಂದ ಸೇರಿದಂತೆ ಐವರು ಆರೋಪಿಗಳ ದೋಷಮುಕ್ತಿಯ ವಿರುದ್ಧ ಮನವಿ ಮಾಡದಿರಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿರ್ಧರಿಸಿದ ಕೆಲವು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ತೀರ್ಪು ನೀಡಿದ ಕೂಡಲೇ ರವೀಂದರ್ ರೆಡ್ಡಿ ಹೈದರಾಬಾದ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗೆ ಪತ್ರ ರವಾನಿಸಿದ್ದಾರೆ. ಅವರು ಇದ್ದಕ್ಕಿಂತ ರಾಜೀನಾಮೆ ನೀಡುವ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ತಾನು ವೈಯುಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ರೆಡ್ಡಿ ಹೇಳಿದ್ದಾರೆ. ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ಬಳಿಕ ಅವರು ರಾಜೀನಾಮೆ ನೀಡಿರುವುದು ಊಹಾ ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.  ಮಕ್ಕಾ ಮಸೀದಿ ಸ್ಫೋಟದಲ್ಲಿ 9 ಮಂದಿ ಮೃತಪಟ್ಟಿದ್ದರು ಹಾಗೂ 59 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News