×
Ad

ಗ್ರಾಹಕ ಹೊಟೇಲ್ ನಲ್ಲಿ ಬಿಟ್ಟುಹೋಗಿದ್ದ 25 ಲಕ್ಷ ರೂ. ಮರಳಿಸಿದ ಸಿಬ್ಬಂದಿ!

Update: 2018-06-03 15:53 IST

ಚೆನ್ನೈ,  ಜೂ 3: ಹೋಟೆಲ್‍ನಲ್ಲಿ ಗ್ರಾಹಕರೊಬ್ಬರು ಬಿಟ್ಟು ಹೋದ 25 ಲಕ್ಷ ರೂ. ಇದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ 31 ವರ್ಷದ ಹೋಟೆಲ್ ವೈಟರ್ ಇದೀಗ ಹೀರೊ ಆಗಿದ್ದಾರೆ. ಸರವಣ್ ಭವನದ ವೈಟರ್ ರವಿ ಪ್ರಾಮಾಣಿಕತೆ ಮೆರೆದು ಎಲ್ಲರಿಗೆ ಮಾದರಿಯಾಗಿದ್ದಾರೆ. ಬಿಡುವಿಲ್ಲದ ಕೆಲಸದ ನಡುವೆಯೂ, ಗ್ರಾಹಕರೊಬ್ಬರು ಬಿಟ್ಟುಹೋದ ಪ್ಲಾಸ್ಟಿಕ್ ಚೀಲವನ್ನು ಒಂದು ಕ್ಷಣವೂ ಯೋಚಿಸದೇ ರವಿ ತಕ್ಷಣ ಮ್ಯಾನೇಜರ್ ಹಸ್ತಾಂತರಿಸಿದ್ದರು.

"ಶುಕ್ರವಾರ ಬೆಳಗ್ಗೆ 11 ಗಂಟೆಗೆ ಟೇಬಲ್ ಸ್ವಚ್ಛಗೊಳಿಸುತ್ತಿದ್ದಾಗ ಗ್ರಾಹಕರೊಬ್ಬರು ಬಿಟ್ಟುಹೋದ ಬ್ಯಾಗ್ ಪತ್ತೆಯಾಯಿತು. ತಕ್ಷಣ ಅದನ್ನು ಒಯ್ದು ಮ್ಯಾನೇಜರ್ ಲೋಕನಾಥನ್ ಅವರಿಗೆ ತಲುಪಿಸಿದೆ" ಎಂದು ರವಿ ಹೇಳುತ್ತಾರೆ.

ರವಿ 13 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. "ಗ್ರಾಹಕರು ಬಿಟ್ಟುಹೋದದ್ದು ಸಹಜವಾಗಿ ಅವರಿಗೆ ಸೇರಬೇಕಾದ್ದು. ಸದಾ ನಾವು ಇಂಥದ್ದು ಪತ್ತೆಯಾದಾಗ ಮ್ಯಾನೇಜರ್ ಗೆ ನೀಡುತ್ತೇವೆ. ಅಂಥ ತರಬೇತಿಯನ್ನು ನಮಗೆ ನೀಡಲಾಗಿದೆ. ಈ ಬಾರಿ ನನಗೆ ವಿಷಯ ತಿಳಿದಾಗ ನಡುಗುವಂತಾಯಿತು. ಪರ್ಸ್  ಅಥವಾ ಫೋನ್ ಇರುವ ಬದಲು ಅದರಲ್ಲಿ 25 ಲಕ್ಷ ರೂ. ಇತ್ತು. ಇನ್ನೂ ಅಚ್ಚರಿ ಎಂದರೆ ಅದನ್ನು ವಾಪಸ್ ಪಡೆಯಲು ಯಾರೂ ಬರಲಿಲ್ಲ. ಆದರೆ ನಾನು ಸರಿಯಾದ್ದನ್ನೇ ಮಾಡಿದ್ದೇನೆ ಎಂಬ ಭಾವನೆ ನನ್ನದು" ಎಂದು ರವಿ ಹೇಳಿದರು.

ರವಿ ಪ್ರಾಮಾಣಿಕತೆ ಮೆಚ್ಚಿದ ಹೋಟೆಲ್ ಮಾಲಕ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಗೊತ್ತಾದ ಬಳಿಕ ಪೊಲೀಸರು ಈತನಿಗೆ ವಾಚನ್ನು ಬಹುಮಾನವಾಗಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News