ರೈಲುಗಳು ವಿಳಂಬಗೊಂಡರೆ ಅಧಿಕಾರಿಗಳ ಭಡ್ತಿಗೆ ಖೋತಾ
ಹೊಸದಿಲ್ಲಿ, ಜೂ.3: ರೈಲುಗಳ ವಿಳಂಬದಿಂದ ಬೇಸತ್ತಿರುವ ಪ್ರಯಾಣಿಕರಲ್ಲಿ ನೆಮ್ಮದಿಯನ್ನು ಮೂಡಿಸುವ ಸುದ್ದಿಯಿಲ್ಲಿದೆ. ರೈಲುಗಳು ವಿಳಂಬವಾಗಿ ಚಲಿಸಿದರೆ ಅಧಿಕಾರಿಗಳ ಭಡ್ತಿಗಳಿಗೆ ಅಡಚಣೆಯಾಗುವುದರಿಂದ ಇನ್ನು ಮುಂದೆ ರೈಲುಗಳು ವೇಳಾಪಟ್ಟಿಗೆ ಅನುಗುಣವಾಗಿ ಚಲಿಸುವ ಸಾಧ್ಯತೆಯಿದೆ.
ರೈಲ್ವೆ ಸೇವೆಗಳಲ್ಲಿ ವಿಳಂಬವಾದರೆ ಭಡ್ತಿ ಅವಕಾಶಗಳು ಮುಂದಕ್ಕೆ ಹೋಗಲಿವೆ ಎಂದು ವಲಯ ರೈಲ್ವೆಗಳ ಮುಖ್ಯಸ್ಥರಿಗೆ ಎಚ್ಚರಿಕೆಯನ್ನು ನೀಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು, ಸಮಯನಿಷ್ಠೆಯನ್ನು ಸುಧಾರಿಸಿಕೊಳ್ಳಲು ಒಂದು ತಿಂಗಳ ಗಡುವು ನೀಡಿದ್ದಾರೆ.
ಕಳೆದ ವಾರ ನಡೆದ ಇಲಾಖಾ ಸಭೆಯಲ್ಲಿ ವಲಯ ಮಹಾ ಪ್ರಬಂಧಕರನ್ನು ತರಾಟೆಗೆತ್ತಿಕೊಂಡ ಗೋಯಲ್,ರೈಲ್ವೆ ಸೇವೆಗಳಲ್ಲಿ ವಿಳಂಬಕ್ಕೆ ಸಮಜಾಯಿಷಿ ನೀಡಲು ನಿರ್ವಹಣಾ ಕಾಮಗಾರಿಗಳ ನೆಪವನ್ನು ಹೇಳುವಂತಿಲ್ಲ ಎಂದು ತಾಕೀತು ಮಾಡಿದ್ದಾಗಿ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
2017-18ನೇ ಸಾಲಿನಲ್ಲಿ ಶೇ.30ರಷ್ಟು ರೈಲುಗಳು ವಿಳಂಬವಾಗಿ ಚಲಿಸಿದ್ದು,ಬೇಸಿಗೆಯ ರಜಾದಿನಗಳಲ್ಲಿಯೂ ಸಮಯನಿಷ್ಠೆಯನ್ನು ಕಾಯ್ದಕೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ.ಮೇ 29ರವರೆಗೆ ಶೇ.49.59ರಷ್ಟು ವಿಳಂಬ ಸಂಚಾರ ದಾಖಲಾಗಿರುವ ಉತ್ತರ ರೈಲ್ವೆ ವಲಯದ ಮಹಾ ಪ್ರಬಂಧಕರು ಸಚಿವರಿಂದ ಹೆಚ್ಚಿನ ತರಾಟೆಗೊಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.