ನಿಪಾಹ್: ಬಾವಲಿಗಳ ದೇಹದ್ರವದ ಪರೀಕ್ಷೆ ವರದಿ ನೆಗೆಟಿವ್

Update: 2018-06-03 15:30 GMT

ತಿರುವನಂತಪುರ, ಜೂ. 3: ಕೇರಳದಲ್ಲಿ ಕೋಲಾಹಲ ಉಂಟು ಮಾಡಿದ ನಿಪಾಹ್ ವೈರಸ್ ಸೋಂಕು ಹರಡಲು ಕಾರಣ ಏನು ಎಂಬುದು ಇದುವರೆಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

 ಪ್ರಾಣಿ ರೋಗಗಳ ಅತ್ಯುಚ್ಛ ಭದ್ರತೆಯ ರಾಷ್ಟ್ರೀಯ ಸಂಸ್ಥೆಗೆ ಕಳುಹಿಸಲಾಗಿದ್ದ ಹಣ್ಣು ತಿನ್ನುವ ಬಾವಲಿಗಳ ದೇಹ ದ್ರವದ ಮಾದರಿಗಳ ವರದಿ ನೆಗೆಟಿವ್ ಎಂದು ಬಂದಿದೆ. ಇದು ಈ ಸಂಸ್ಥೆಗೆ ಕಳುಹಿಸಲಾಗಿದ್ದ ಎರಡನೇ ಹಂತದ ದೇಹದ್ರವದ ವರದಿ. ಮೊದಲ ಹಂತದಲ್ಲಿ ಹಂದಿ, ಆಡು, ಜಾನುವಾರು, ಕೀಟ ತಿನ್ನುವ ಬಾವಲಿಗಳ ದೇಹದ್ರವನ್ನು ಕಳುಹಿಸಲಾಗಿತ್ತು. ಅದರ ವರದಿ ನೆಗೆಟಿವ್ ಎಂದು ಬಂದಿತ್ತು.

ನಿಪಾಹ್ ವೈರಸ್ ಸೋಂಕು ಹರಡಿದ ಕೇಂದ್ರ ಕೋಝಿಕೋಡ್‌ನ ಕುಟುಂಬ. ನಿಪಾಹ್ ವೈರಸ್ ಸೋಂಕಿನಿಂದ ಈ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹಣ್ಣು ತಿನ್ನುವ ಬಾವಲಿಗಳಿಗೆ ನಿಪಾಹ್ ವೈರಸ್ ಸೋಂಕು ಈ ಕುಟುಂಬಕ್ಕೆ ಹರಡಿರಬಹುದು ಎಂದು ರಾಜ್ಯ ಸರಕಾರದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು.

‘‘ಇಲ್ಲಿಂದ ಕಳುಹಿಸಲಾದ ದೇಹ ದ್ರವದ ಯಾವುದೇ ಮಾದರಿಯಲ್ಲಿ ನಿಪಾಹ್ ವೈರಸ್ ಕಂಡು ಬಂದಿಲ್ಲ. ನಾವು ಹಲವು ದೇಹ ದ್ರವದ ಮಾದರಿಗಳನ್ನು ಕಳುಹಿಸಿದ್ದೇವೆ. ಆದರೆ, ಎಲ್ಲವೂ ನೆಗೆಟಿವ್ ಬಂದಿದೆ’’ ಎಂದು ಪಶು ಸಂಗೋಪನೆ ನಿರ್ದೇಶಕ ಎನ್.ಎನ್. ಸಸಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News