3ನೇ ದಿನಕ್ಕೆ ಕಾಲಿರಿಸಿದ ರೈತರ ಪ್ರತಿಭಟನೆ

Update: 2018-06-03 15:50 GMT

ಹೊಸದಿಲ್ಲಿ, ಜೂ. 3: ರೈತ ಸಂಘಟನೆಗಳು ಕರೆ ನೀಡಿದ್ದ 10 ದಿನಗಳ ರಾಷ್ಟ್ರ ವ್ಯಾಪಿ ಪ್ರತಿಭಟನೆ ರವಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇದು ತರಕಾರಿ ಹಾಗೂ ಹಾಲು ಪೂರೈಕೆ ಮೇಲೆ ಪರಿಣಾಮ ಬೀರಿದೆ ಹಾಗೂ ತರಕಾರಿಗೆ ಬೆಲೆ ಹೆಚ್ಚಳವಾಗಿದೆ.

ಕೇಂದ್ರ ಸಂಘಟನೆಯಾದ ರಾಷ್ಟ್ರೀಯ ಕಿಸಾನ್ ಮಹಾಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 100ಕ್ಕೂ ಅಧಿಕ ರೈತ ಸಂಘಟನೆಗಳು ಭಾಗಿಯಾಗಿದ್ದವು. ಸಾಲ ಮನ್ನಾ ಹಾಗೂ ಬೆಳೆಗೆ ಸೂಕ್ತ ಬೆಲೆ ಆಗ್ರಹಿಸಿ ರೈತರು ಬಂದ್‌ಗೆ ಕರೆ ನೀಡಿದ್ದರು. ದೇಶದ ವಿವಿಧ ಭಾಗಗಳಲ್ಲಿ ರೈತರು ಘೋಷಣೆಗಳನ್ನು ಕೂಗುವುದು ಹಾಗೂ ಬೀದಿಯಲ್ಲಿ ತರಕಾರಿಗಳನ್ನು ಎಸೆಯುವುದು ಕಂಡು ಬಂತು.

ಕೃಷಿ ಕ್ಷೇತ್ರದಲ್ಲಿ ಸ್ವಾಮಿನಾಥನ್ ಆಯೋಗದ ವರದಿಯ ಶೀಘ್ರ ಅನುಷ್ಠಾನ, ತಮ್ಮ ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಸಾಲ ಮನ್ನಾಕ್ಕೆ ಆಗ್ರಹಿಸಿ ರೈತರು ಶುಕ್ರವಾರ ಆರಂಭಿಸಿದ ‘ಗಾಂವ್ ಬಂದ್’ (ಗ್ರಾಮ ಬಂದ್)ನಲ್ಲಿ ಯಾವುದೇ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿಲ್ಲ.

ಕೆಲವು ಸ್ಥಳಗಳಲ್ಲಿ ತರಕಾರಿಗಳನ್ನು ಪೊಲೀಸ್ ರಕ್ಷಣೆಯಲ್ಲಿ ಮಾರಾಟ ಮಾಡಲಾಯಿತು. ‘‘ಪ್ರತಿಭಟನೆಗೆ ರೈತರು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುತ್ತಿದ್ದಾರೆ. ಯಾಕೆಂದರೆ, ಪೂರೈಕೆ ನಗರಕ್ಕೆ ತಲುಪುತ್ತಿಲ್ಲ. ಸರಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ, ವಿಫಲವಾಗಿದೆ’’ ಎಂದು ಆಮ್ ಕಿಸಾನ್ ಸಂಘಟನೆಯ ಮುಖ್ಯಸ್ಥ ಕೇದಾರ್ ಸಿರೋಹಿ ತಿಳಿಸಿದ್ದಾರೆ.

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶನಿವಾರ, ಪ್ರತಿಭಟನೆಗೆ ಯಾವುದೇ ಕಾರಣ ಇಲ್ಲ ಎಂದು ಹೇಳಿದ್ದರು.

‘‘ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಅವರು ಮುಷ್ಕರದ ಮೂಲಕ ಅನಗತ್ಯ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸುತ್ತಿದ್ದಾರೆ. ಉತ್ಪನ್ನವನ್ನು ಮಾರಾಟ ಮಾಡದೇ ಇದ್ದರೆ, ರೈತರಿಗೆ ಮಾತ್ರ ನಷ್ಟ ಉಂಟಾಗುತ್ತದೆ’’ ಎಂದು ಖಟ್ಟರ್ ಹೇಳಿದ್ದರು.

ಸ್ವಾಮಿನಾಥನ್ ಆಯೋಗದ ವರದಿ ಜಾರಿ, ಸಾಲ ಮನ್ನಾ ಹಾಗೂ ಬೆಳೆಗೆ ಸೂಕ್ತ ಬೆಲೆಗೆ ಆಗ್ರಹಿಸಿ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಉತ್ತರಪ್ರದೇಶ ಹಾಗೂ ಹರ್ಯಾಣದ ಸಾವಿರಾರು ರೈತರು 10 ದಿನಗಳ ರಾಷ್ಟ್ರ ವ್ಯಾಪಿ ಪ್ರತಿಭಟನೆಯನ್ನು ಜೂನ್ 1ರಂದು ಆರಂಭಿಸಿದ್ದರು.

ಪೊಲೀಸ್ ಗೋಲಿಬಾರ್‌ನಲ್ಲಿ 6 ಮಂದಿ ರೈತರು ಮೃತಪಟ್ಟ ಮಧ್ಯಪ್ರದೇಶದ ಮಂದ್‌ಸೋರ್ ಪ್ರತಿಭಟನೆಯ ಮೊದಲ ವರ್ಷಾಚರಣೆಯ ನೆನಪಿನಲ್ಲಿ ಇಲ್ಲಿಂದಲೇ ಪ್ರತಿಭಟನೆ ಆರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News