ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಣತಗೆ ‘ನರಕಕ್ಕೆ ಹೋಗಿ’ ಎಂದ ಡುಟರ್ಟ್

Update: 2018-06-03 16:33 GMT

ಮನಿಲಾ (ಫಿಲಿಪ್ಪೀನ್ಸ್), ಜೂ. 3: ಫಿಲಿಪ್ಪೀನ್ಸ್‌ನ ನ್ಯಾಯಾಂಗ ಸ್ವಾತಂತ್ರ್ಯ ಬೆದರಿಕೆಗೊಳಗಾಗಿದೆ ಎಂದು ಹೇಳಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಣತ, ‘ನರಕಕ್ಕೆ ಹೋಗಲಿ’ ಎಂದು ದೇಶದ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಹೇಳಿದ್ದಾರೆ ಹಾಗೂ ದೇಶದ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದರಿಂದ ದೂರವಿರುವಂತೆ ಎಚ್ಚರಿಸಿದ್ದಾರೆ.

ಫಿಲಿಪ್ಪೀನ್ಸ್ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಮುಖ್ಯ ನ್ಯಾಯಾಧೀಶೆ ಮರಿಯಾ ಲೂರ್ಡ್ಸ್ ಸೆರೀನೊ ಅವರನ್ನು ಮತದಾನದ ಮೂಲಕ ಅಧಿಕಾರದಿಂದ ಹೊರಗಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಅವರನ್ನು ಮುಖ್ಯ ನ್ಯಾಯಾಧೀಶೆಯಾಗಿ ನೇಮಿಸುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದಾಗಿ ಆರೋಪಿಸಲಾಗಿತ್ತು.

ಈ ನ್ಯಾಯಾಧೀಶೆಯು ಸರಕಾರದ ವಿವಾದಾಸ್ಪದ ಪ್ರಸ್ತಾಪಗಳ ವಿರುದ್ಧವಾಗಿ ಮತ ಚಲಾಯಿಸಿದ್ದರು ಹಾಗೂ ಅದಕ್ಕಾಗಿ ಅವರನ್ನು ‘ಶತ್ರು’ ಎಂಬುದಾಗಿ ಅಧ್ಯಕ್ಷ ಡುಟರ್ಟ್ ಘೋಷಿಸಿದ್ದರು.

ಈ ನ್ಯಾಯಾಧೀಶೆಯನ್ನು ವಜಾಗೊಳಿಸಿರುವ ರೀತಿಯು ಸುಪ್ರೀಂ ಕೋರ್ಟ್‌ನ ಇತರ ನ್ಯಾಯಾಧೀಶರು ಮತ್ತು ನ್ಯಾಯಾಂಗದ ಸದಸ್ಯರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ ಎಂಬುದಾಗಿ ನ್ಯಾಯಾಧೀಶರು ಮತ್ತು ವಕೀಲರ ಸ್ವಾತಂತ್ರ್ಯ ಕುರಿತ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಡೀಗೊ ಗಾರ್ಸಿಯ ಸಯಾನ್ ಶುಕ್ರವಾರ ಹೇಳಿದ್ದರು.

‘‘ನನ್ನ ದೇಶದ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದು ಬೇಡ ಎಂದು ಅವರಿಗೆ ಹೇಳಿ. ಅವರು ಬೇಕಾದರೆ ನರಕಕ್ಕೆ ಹೋಗಲಿ’’ ಎಂದು ದಕ್ಷಿಣ ಕೊರಿಯ ಪ್ರವಾಸಕ್ಕೆ ತೆರಳುವ ಮುನ್ನ ಶನಿವಾರ ತಡ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡುಟರ್ಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News