×
Ad

ವಿಮಾನನಿಲ್ದಾಣದ ತೆರಿಗೆ ಮುಕ್ತ ಅಂಗಡಿಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಜಿಎಸ್‌ಟಿ ಇಲ್ಲ

Update: 2018-06-03 22:51 IST

ಹೊಸದಿಲ್ಲಿ, ಜೂ.3: ವಿಮಾನನಿಲ್ದಾಣಗಳಲ್ಲಿರುವ ತೆರಿಗೆ ಮುಕ್ತ ಅಂಗಡಿಗಳಲ್ಲಿ ಸರಕು ಖರೀದಿಸುವಾಗ ಅಂತರಾಷ್ಟ್ರೀಯ ಪ್ರಯಾಣಿಕರು ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ವಿನಾಯಿತಿಯ ಬಗ್ಗೆ ಶೀಘ್ರವೇ ತೆರಿಗೆ ಇಲಾಖೆ ಸ್ಪಷ್ಟಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಎಸ್‌ಟಿಯ ‘ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್’ದ ದಿಲ್ಲಿ ಪೀಠವು ಮಾರ್ಚ್‌ನಲ್ಲಿ ಹೊರಡಿಸಿರುವ ಆದೇಶದಲ್ಲಿ ವಿಮಾನನಿಲ್ದಾಣಗಳ ತೆರಿಗೆಮುಕ್ತ ಅಂಗಡಿಗಳಲ್ಲಿ ಮಾರಲಾಗುವ ಸರಕುಗಳ ಮೇಲೆ ಜಿಎಸ್‌ಟಿ ವಿಧಿಸಬಹುದು ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ತೆರಿಗೆ ಇಲಾಖೆಗೆ ಹಲವಾರು ಮನವಿಗಳು ಬಂದಿದ್ದವು. ತೆರಿಗೆಯನ್ನೂ ರಫ್ತು ಮಾಡುವಂತಿಲ್ಲ ಎಂಬುದು ನಮ್ಮ ನಿಲುವಾಗಿದೆ. ಆದ್ದರಿಂದ ತೆರಿಗೆಮುಕ್ತ ಅಂಗಡಿಗಳಲ್ಲಿ ಜಿಎಸ್‌ಟಿ ವಿಧಿಸಬಾರದು ಎಂಬ ಬಗ್ಗೆ ಸ್ಪಷ್ಟೀಕರಣ ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಂಗಡಿಗಳು ಸರಕು ಖರೀದಿಸುವವರ ಪಾಸ್‌ಪೋರ್ಟ್‌ನ ಪ್ರತಿಯನ್ನು ಪಡೆದು, ಬಳಿಕ ಸರಕಾರದಿಂದ ಜಿಎಸ್‌ಟಿ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು .ಉತ್ಪಾದಕರಿಂದ ಸರಕುಗಳನ್ನು ಪಡೆಯುವಾಗ ಪಾವತಿಸಿದ ಜಿಎಸ್‌ಟಿಯನ್ನು ಈ ಅಂಗಡಿಗಳು ಸರಕಾರದಿಂದ ಪಡೆಯಬಹುದು ಎಂಬುದು ಇದರರ್ಥವಾಗಿದೆ ಎಂದವರು ವಿವರಿಸಿದ್ದಾರೆ. ಜಿಎಸ್‌ಟಿ ಜಾರಿಯಾಗುವ ಮೊದಲು ಅನುಷ್ಠಾನದಲ್ಲಿದ್ದ ಕೇಂದ್ರ ಮಾರಾಟ ತೆರಿಗೆ ಹಾಗೂ ವೌಲ್ಯವರ್ಧಿತ ತೆರಿಗೆ ಪದ್ದತಿಯಿಂದಲೂ ಈ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿತ್ತು. ತೆರಿಗೆ ಮುಕ್ತ ಅಂಗಡಿಗಳು ಭಾರತದ ವ್ಯಾಪ್ತಿ ಪ್ರದೇಶದೊಳಗೆ ಇರುವ ಕಾರಣ ಹಾಗೂ ಸರಕುಗಳನ್ನು ಭಾರತದಿಂದ ಹೊರಗೆ ಕೊಂಡೊಯ್ಯದ ಹಿನ್ನೆಲೆಯಲ್ಲಿ ಈ ಅಂಗಡಿಗಳ ವ್ಯವಹಾರವನ್ನು 2017ರ ಐಜಿಎಸ್‌ಟ ಕಾಯ್ದೆಯ ಸೆಕ್ಷನ್ 2(5)ರಡಿ ರಫ್ತು ಎಂದು ಕರೆಯಲಾಗದು, ಅಥವಾ ಇದೇ ಕಾಯ್ದೆಯ ಸೆಕ್ಷನ್ 2(23)ರಡಿ ‘ಶೂನ್ಯ ದರದ ಪೂರೈಕೆ’ ಎಂದು ಹೆಸರಿಸಲಾಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News