ಸೋಮವಾರ (ಜೂ.3) ಭಾರತಕ್ಕೆ ಕೀನ್ಯ ಎದುರಾಳಿ

Update: 2018-06-03 18:21 GMT

► ಎಲ್ಲರ ಚಿತ್ತ ಚೆಟ್ರಿಯತ್ತ

ಮುಂಬೈ, ಜೂ.3: ಇಂಟರ್‌ಕಾಂಟಿನೆಂಟಲ್ ಫುಟ್ಬಾಲ್ ಕಪ್‌ನಲ್ಲಿ ಸೋಮವಾರ ಭಾರತ ತಂಡ ಕೀನ್ಯವನ್ನು ಎದುರಿಸಲಿದೆ. 100ನೇ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಲಿರುವ ಸುನೀಲ್ ಚೆಟ್ರಿ ಮೇಲೆ ಎಲ್ಲರ ದೃಷ್ಟಿಹರಿದಿದೆ.

ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಈ ವರೆಗೆ ಒಟ್ಟು 59 ಗೋಲುಗಳನ್ನು ಬಾರಿಸಿರುವ ಸ್ಟ್ರೈಕರ್ ಚೆಟ್ರಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಆಗಿದ್ದಾರೆ.

ಮುಂಬೈ ಫುಟ್ಬಾಲ್ ಅರೆನಾದಲ್ಲಿ ಭಾರತ ಮತ್ತೊಂದು ಗೆಲುವು ಸಾಧಿಸಿದರೆ ಟೂರ್ನಮೆಂಟ್‌ನ ಫೈನಲ್ ಹಂತಕ್ಕೆ ಪ್ರವೇಶ ಪಡೆಯುತ್ತದೆ. ಈ ಟೂರ್ನಿಯು ಮುಂದಿನ ವರ್ಷ ನಡೆಯುವ ಏಶ್ಯನ್ ಕಪ್‌ಗೆ ಪೂರ್ವತಯಾರಿಯಾಗಿದೆ.

97ನೇ ರ್ಯಾಂಕಿನ ಭಾರತ ತಂಡ ಟೂರ್ನಮೆಂಟ್‌ನ ತನ್ನ ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 5-0 ಅಂತರದಿಂದ ಮಣಿಸಿ ಶುಭಾರಂಭ ಮಾಡಿತ್ತು.

ಚೆಟ್ರಿ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮೂರನೇ ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿ ಗಮನ ಸೆಳೆದಿದ್ದರು. ದೈಹಿಕವಾಗಿ ಶಕ್ತಿಶಾಲಿಯಾಗಿರುವ ಆಫ್ರಿಕದ ಕೀನ್ಯ ಆಟಗಾರರ ವಿರುದ್ಧವೂ ಚೆಟ್ರಿ ತೈಪೆ ವಿರುದ್ಧ ತೋರಿರುವ ಪ್ರದರ್ಶನವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ.

ಚೆಟ್ರಿ ಅವರ ಸಹ ಸ್ಟ್ರೈಕರ್ ಜೇಜೆ ಲಾಲ್‌ಪೆಕುವಾ ಲಯ ಕಂಡುಕೊಂಡರೆ ಯಾವುದೇ ದಾಳಿಯನ್ನು ಪುಡಿಗೈಯುವ ಸಾಮರ್ಥ್ಯ ಹೊಂದಿದ್ದಾರೆ.

ಭಾರತ ತಂಡ ಆಕ್ರಮಣಕಾರಿ ಮಿಡ್‌ಫೀಲ್ಡರ್‌ಗಳಾದ ಉದಾಂತ್ ಸಿಂಗ್, ಅನಿರುದ್ಧ ಥಾಪ ಹಾಗೂ ಪ್ರಣಯ್ ಹಲ್ದರ್ ಅವರಿದ್ದಾರೆ. ಈ ಮೂವರು ತೈಪೆ ವಿರುದ್ಧ ಕಳೆದ ಪಂದ್ಯದಲ್ಲಿ ಕ್ಲಿಕ್ ಆಗಿದ್ದರು.

 ಉದಾಂತ್ ಹಾಗೂ ಪ್ರಣಯ್ ತೈಪೆ ವಿರುದ್ಧ ತಲಾ ಒಂದು ಗೋಲು ಬಾರಿಸಿದ್ದರು. ಅನುಭವಿ ಸಂದೇಶ್ ಜಿಂಘಾನ್, ನಾರಾಯಣ ದಾಸ್ ಸುಭಾಶಿಸ್ ಬೋಸ್ ಹಾಗೂ ಪ್ರೀತಂ ಕೊಟಾಲ್ ಉಪಸ್ಥಿತಿಯಲ್ಲಿ ಭಾರತದ ಡಿಫೆನ್ಸ್ ವಿಭಾಗ ಬಲಿಷ್ಠವಾಗಿದೆ.

ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.

ತೈಪೆ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿರುವುದಕ್ಕೆ ಕೋಚ್ ಕಾನ್‌ಸ್ಟನ್‌ಟೈನ್ ಸಂತೋಷಗೊಂಡಿದ್ದಾರೆ. ಆದರೆ, ಇದೇ ಪ್ರದರ್ಶನ ಮುಂದುವರಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಭಾರತ ತಂಡ ರ್ಯಾಂಕಿಂಗ್‌ನಲ್ಲಿ ಕೀನ್ಯಕ್ಕಿಂತ ಮೇಲಿದೆ. ತವರಿನ ವಾತಾವರಣವನ್ನು ಬಳಸಿಕೊಳ್ಳಲು ಸಾಧ್ಯವಿದೆ.

 ಮತ್ತೊಂದೆಡೆ, ಕೀನ್ಯ ತಂಡ ಸುನೀಲ್ ಚೆಟ್ರಿ ಬಳಗಕ್ಕೆ ಶಾಕ್ ನೀಡಲು ಕಾಯುತ್ತಿದೆ. ಭಾರತ ಉತ್ತಮ ತಂಡ ಎಂದು ಕೀನ್ಯ ಕೋಚ್ ಸೆಬಾಸ್ಟಿಯನ್ ಮಿಂಗೆ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News