ಮಲೇಷ್ಯಾ 27 ರನ್‌ಗೆ ಆಲೌಟ್

Update: 2018-06-03 18:24 GMT

ಕೌಲಾಲಂಪುರ, ಜೂ.3: ಮಹಿಳೆಯರ ಟ್ವೆಂಟಿ-20 ಏಶ್ಯಾಕಪ್‌ನಲ್ಲಿ ರವಿವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಮಲೇಷ್ಯಾ ತಂಡ ಕೇವಲ 27 ರನ್‌ಗೆ ಆಲೌಟಾಯಿತು. ಮಲೇಷ್ಯಾದ ಆರು ಆಟಗಾರ್ತಿಯರು ಶೂನ್ಯ ಸಂಪಾದಿಸಿದರು.

ಮಲೇಷ್ಯಾವನ್ನು ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಮಾಡಿದ ಭಾರತ 142 ರನ್ ಅಂತರದಿಂದ ಭರ್ಜರಿ ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ಹಿರಿಯ ಆಟಗಾರ್ತಿ ಮಿಥಾಲಿ ರಾಜ್ 69 ಎಸೆತಗಳಲ್ಲಿ ಔಟಾಗದೆ 97 ರನ್ ಗಳಿಸಿದರು. ಇಲ್ಲಿನ ಕಿನಾರ ಅಕಾಡಮಿ ಓವಲ್‌ನಲ್ಲಿ ಸಂಪೂರ್ಣ ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಭಾರತ ಎದುರಾಳಿ ಮಲೇಷ್ಯಾವನ್ನು ಕೇವಲ 13.4 ಓವರ್‌ಗಳಲ್ಲಿ ಆಲೌಟ್ ಮಾಡಿತು.

ಪೂಜಾ ವಸ್ತ್ರಕರ್ ಮಧ್ಯಮ ವೇಗದ ಬೌಲಿಂಗ್‌ನ ಮೂಲಕ ಕೇವಲ 6 ರನ್ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಸ್ಪಿನ್‌ದ್ವಯರಾದ ಅನುಜಾ ಪಾಟೀಲ್ ಹಾಗೂ ಪೂನಂ ಯಾದವ್ ಒಂದೂ ರನ್ ನೀಡದೇ ತಲಾ ಎರಡು ವಿಕೆಟ್ ಕಬಳಿಸಿದರು. ಮಲೇಷ್ಯಾದ ಐವರು ಆಟಗಾರ್ತಿಯರು ರನ್‌ಖಾತೆ ತೆರೆದರು. ಒಂದು ಹಂತದಲ್ಲಿ 12 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಮಲೇಷ್ಯಾಕ್ಕೆ ನಾಯಕಿ ವಿಲ್ಫ್ರೆಡ್ ದುಗೈಸಿಂಗಂ(21 ಎಸೆತ, 5 ರನ್) ಹಾಗೂ ಝುಮಿಕಾ ಅಝ್ಮಿ(15 ಎಸೆತ, 4 ರನ್)ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತು ಕುಸಿತವನ್ನು ತಡೆದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಆರಂಭ ಚೆನ್ನಾಗಿರಲಿಲ್ಲ. ಪವರ್‌ಪ್ಲೇ ಓವರ್ ಕೊನೆಯಲ್ಲಿ ಭಾರತ 35 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ 23 ಎಸೆತಗಳಲ್ಲಿ 32 ರನ್ ಗಳಿಸಿದರು. ಹಿರಿಯ ಆಟಗಾರ್ತಿ ಮಿಥಾಲಿ 140.57ರ ಸ್ಟ್ರೈಕ್‌ರೇಟ್‌ನಲ್ಲಿ ಮತ್ತೊಮ್ಮೆ ತಂಡವನ್ನು ಆಧರಿಸಿದರು.ಮಿಥಾಲಿ 69 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ್ದಾರೆ. ಕೊನೆಯ ಎರಡು ಓವರ್‌ನಲ್ಲಿ ಬೌಂಡರಿ ಬಾರಿಸಲು ವಿಫಲವಾದ ಮಿಥಾಲಿ 3 ರನ್‌ನಿಂದ ಶತಕ ವಂಚಿತರಾದರು. ಹರ್ಮನ್‌ಪ್ರೀತ್‌ರೊಂದಿಗೆ 86 ರನ್ ಜೊತೆಯಾಟ ನಡೆಸಿದ ಮಿಥಾಲಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News