ಶಿಕ್ಷಕರು, ಪದವೀಧರರಿಗೆ ಬಿಜೆಪಿಯಿಂದ ಪ್ರಯೋಜನವಾಗಿಲ್ಲ: ಐವನ್ ಡಿಸೋಜ

Update: 2018-06-04 08:06 GMT

ಮಂಗಳೂರು, ಜೂ.4: ನೈರುತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ಬಿಜೆಪಿ ಪ್ರತಿನಿಧಿಗಳು ಪ್ರನಿಧಿಸುತ್ತಿದ್ದರೂ, ಆ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಗಮನಹರಿಸಿಲ್ಲ ಎಂದು ವಿಧಾನ ಪರಿಷತ್‌ನ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಕಣದಲ್ಲಿರುವ ಎಸ್.ಪಿ.ದಿನೇಶ್ ಹಾಗೂ ಕೆ.ಕೆ. ಮಂಜುನಾಥ್ ಕಮಾರ್ ಕಾಂಗ್ರೆಸ್ ಪಕ್ಷದಿಂದ ಅನುಕ್ರಮವಾಗಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲವು ಸಾಧಿಸಲಿದ್ದಾರೆ ಎಂದವರು ಹೇಳಿದರು. ವಿಧಾನ ಪರಿಷತ್‌ನಲ್ಲಿ 18 ಪದವೀಧರ, ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳಿದ್ದರೂ ಈ ಕ್ಷೇತ್ರದಲ್ಲಿ ಗುರುತರ ಬದಲಾವಣೆ ಮಾಡಲು ಅವರಿಂದ ಸಾಧ್ಯವಾಗಿಲ್ಲ. ನಾನು ಇವೆರಡು ಕ್ಷೇತ್ರಗಳ ಪ್ರತಿನಿಧಿ ಅಲ್ಲದಿದ್ದರೂ ಅವರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಆರು ತಿಂಗಳಿಗೆ ಮುಂಚಿತವಾಗಿಯೇ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ನೈರುತ್ಯ ಕ್ಷೇತ್ರದಲ್ಲಿ ಐದೂವರೆ ಜಿಲ್ಲೆಗಳಲ್ಲಿ ಪದವೀಧರ ಕ್ಷೇತ್ರದಲ್ಲಿ 61,000 ಮತದಾರರಿದ್ದು, ಶಿಕ್ಷಕರ ಕ್ಷೇತ್ರದಲ್ಲಿ 21,000 ಮತದಾರರಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಶಿಕ್ಷಕರ ಮತ್ತು ಉಪನ್ಯಾಸಕರ ನೇಮಕಾತಿಯಾಗಿದೆ. ಕಾಲ್ಪನಿಕ ವೇತನ ನೀಡುವ ಹಿನ್ನೆಲೆಯಲ್ಲಿ 325 ಕೋಟಿ ರೂ. ಮೀಸಲಿಡಲಾಗಿದೆ. ಪ.ಪೂ. ಶಿಕ್ಷಕರಿಗೆ ಭಡ್ತಿ ಒದಗಿಸಲಾಗಿದೆ. ಐಟಿಐ ಮತ್ತಿತರ ಕಾಲೇಜುಗಳನ್ನು ಸ್ಥಾಪಿಸಿ ಉದ್ಯೋಗ ದೊರಕಿಸುವ ಕೆಲಸ ಮಾಡಿದ್ದೇವೆ. ಆದರೆ ರಾಜ್ಯದಲ್ಲಿ ಹಿಂದೆ ಏಳು ವರ್ಷಗಳ ಕಾಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಯಾವ ಮಹತ್ತರ ಬದಲಾವಣೆ ತಂದಿದ್ದೀರಿ ಎಂದರೆ ಅವರಲ್ಲಿ ಉತ್ತರವಿಲ್ಲ. ಜ್ಯೂನಿಯರ್ ಟೆಕ್ನಿಕಲ್ ಸ್ಕೂಲ್ ಆರಂಭಿಸಿದರೂ ಬಿಜೆಪಿ ಸರ್ಕಾರ ಸಂಬಳವನ್ನೇ ನೀಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅವರಿಗೆ ವೇತನ ನೀಡಲಾಗಿದೆ ಎಂದು ಐವನ್ ದೂರಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ ಪೂರ್ತಿಯಾದರೂ ಪದವೀಧರರಿಗೆ ನೀಡಿದ ಭರವಸೆಗಳೆಲ್ಲ ಸುಳ್ಳಾಗಿವೆ. ಚುನಾವಣೆಗೆ ಮೊದಲು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರೂ 2 ಲಕ್ಷವೂ ದಾಟಿಲ್ಲ. ಈಗ ಪಕೋಡ ಮಾರಿ ಬದುಕಿ ಎನ್ನುತ್ತಿದ್ದರೂ ಪೆಟ್ರೋಲ್, ಸೀಮೆಎಣ್ಣೆ ಬೆಲೆಯನ್ನು ತುಟ್ಟಿಗೊಳಿಸಿದೆ. ಆದರೆ ಕೇವಲ ನಮ್ಮ ರಾಜ್ಯವೊಂದರಲ್ಲೇ ಅದಕ್ಕಿಂತಲೂ ಹೆಚ್ಚು 3.5 ಲಕ್ಷ ಉದ್ಯೋಗಗಳನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ. ಈಗ ಬಿಜೆಪಿಯವರಿಗೆ ಮತ ಕೇಳಲು ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಒತ್ತಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಧ್ಯಾ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲಾಗಿದ್ದು, ಈಗ 2ನೇ ವರ್ಷಕ್ಕೆ ಕಾಲಿರಿಸಿದೆ. ಬಿಜೆಪಿಯವರು ಇಂಥದ್ದು ಏನಾದರೂ ಮಾಡಿದ್ದಾರೆಯೇ? ಪಾಲಿಟೆಕ್ನಿಕ್ ಕಾಲೇಜುಗಳಿಗೆ 8 ಸಾವಿರ ಗೌರವ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ವೇತನ ಹೆಚ್ಚಳ ಮಾಡಿದ್ದೇವೆ. ಕ್ರೀಡಾ ನೀತಿಯನ್ನು ಜಾರಿಗೊಳಿಸಿದ್ದೇವೆ. ಇನ್ನು ಮುಂದೆಯೂ ಸಮಸ್ಯೆ ನಿವಾರಣೆಗೆ ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ ಎಂದರು.

ಪೂರ್ಣಾವಧಿ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ಸಹಮತ
ಎಚ್.ಡಿ. ಕುಮಾರಸ್ವಾಮಿಯವರನ್ನು ರಾಜ್ಯ ಸಮ್ಮಿಶ್ರ ಸರ್ಕಾರದ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಅಸಮಾಧಾನ ಕೇಳಿಬರುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಐವನ್, ಇದು ಹೈಕಮಾಂಡ್ ನಿರ್ಧಾರ. ಸಮ್ಮಿಶ್ರ ಸರ್ಕಾರ ದೃಢವಾಗಿರಬೇಕಾದರೆ ಪೂರ್ಣಾವಧಿ ನಾಯಕತ್ವ ಬೇಕಾಗುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ಸಂಪೂರ್ಣ ಸಹಮತವಿದೆ ಎಂದು ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಇಬ್ರಾಹೀಂ ಕೋಡಿಜಾಲ್, ವಿಶ್ವಾಸ್ ಕುಮಾರ್ ದಾಸ್, ಅಶೋಕ್ ಡಿ.ಕೆ., ಆಶಾ ಡಿಸಿಲ್ವಾ, ಪುನೀತ್ ಶೆಟ್ಟಿ, ಅಮೃತ್ ಕದ್ರಿ, ಐಮೋನ್ ಕಣ್ಣೂರು, ಪ್ರೇಮ್ ಬಳ್ಳಾಲ್ ಬಾಗ್, ಜೇಮ್ಸ್ ಡಿಸೋಜ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News