ಇಂಟರ್‌ಕಾಂಟಿನೆಂಟಲ್ ಕಪ್: ಕೀನ್ಯ ಕೆಡವಿದ ಭಾರತ

Update: 2018-06-04 17:15 GMT

► ಪಂದ್ಯದ ಟಿಕೆಟ್ ಸೋಲ್ಡ್‌ ಔಟ್

ಮುಂಬೈ, ಜೂ.4: ಕೀನ್ಯ ವಿರುದ್ಧ ಸೋಮವಾರ ಇಲ್ಲಿ ನಡೆದ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಪಂದ್ಯದಲ್ಲಿ ಬೈಚುಂಗ್ ಭುಟಿಯಾ ಹಾಗೂ ಐಎಂ ವಿಜಯನ್ ಹಾಜರಿದ್ದರು. ಕ್ರೀಡಾಂಗಣದಲ್ಲಿ ಫುಟ್ಬಾಲ್ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಮುಂಬೈ ಫುಟ್ಬಾಲ್ ಅರೆನಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಸುನೀಲ್ ಚೆಟ್ರಿ.

ಸೋಮವಾರ ನಾಯಕ ಚೆಟ್ರಿ ಭಾರತದ ಪರ 100ನೇ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿದ್ದು, ಚೆಟ್ರಿ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ಕೀನ್ಯವನ್ನು 3-0 ಅಂತರದಿಂದ ಮಣಿಸಿತು. ನಾಲ್ಕು ದೇಶಗಳು ಭಾಗವಹಿಸುತ್ತಿರುವ ಟೂರ್ನಿಯಲ್ಲಿ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತು. ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆಯನ್ನು 5-0 ಅಂತರದಿಂದ ಮಣಿಸಿತ್ತು.

68ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಚೆಟ್ರಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 71ನೇ ನಿಮಿಷದಲ್ಲಿ ಗೋಲು ಬಾರಿಸಿದ ಜೇಜೆ ಲಾಲ್‌ಪೆಕುಲ್ವಾ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು.

ಇಂಜುರಿ ಟೈಮ್‌ನಲ್ಲಿ (92ನೇ ನಿಮಿಷ) ಮತ್ತೊಂದು ಗೋಲು ಬಾರಿಸಿದ ಚೆಟ್ರಿ ಭಾರತಕ್ಕೆ 3-0 ಅಂತರದ ಗೆಲುವು ತಂದರು.

100ನೇ ಪಂದ್ಯ ಆಡಿದ ಚೆಟ್ರಿಗೆ ಭುಟಿಯಾ ಹಾಗೂ ವಿಜಯನ್ ಸನ್ಮಾನಿಸಿದರು. ಚೆಟ್ರಿಗೆ ಸಹ ಆಟಗಾರರು ಸಾಲಾಗಿ ನಿಂತು ಗೌರವ ಸಲ್ಲಿಸಿದರು. ಈ ವೇಳೆ ಸ್ಟೇಡಿಯಂನಲ್ಲಿ ಚೆಟ್ರಿ ಪತ್ನಿ ಹಾಗೂ ಹೆತ್ತವರು ಇದ್ದರು. ಇದೀಗ 100 ಪಂದ್ಯಗಳಲ್ಲಿ ಒಟ್ಟು 61 ಗೋಲುಗಳನ್ನು ಬಾರಿಸಿರುವ ಚೆಟ್ರಿ ವಿಶ್ವದ ಅಗ್ರ ಸ್ಕೋರರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಭುಟಿಯಾ ಬಳಿಕ ಭಾರತದ ಪರ 100 ಅಂತರ್‌ರಾಷ್ಟ್ರೀಯ ಪಂದ್ಯ ಆಡಿದ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅವರು ಚೆಟ್ರಿಯವರ 100ನೇ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಾರತೀಯ ಫುಟ್ಬಾಲ್‌ನ್ನು ಬೆಂಬಲಿಸುವಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದರು. 33ರ ಹರೆಯದ ಚೆಟ್ರಿ ಕೂಡ ಪಂದ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸುವಂತೆ ಕೋರಿದ್ದರು.

 ಕ್ರೀಡಾಳುಗಳ ಕರೆಗೆ ಓಗೊಟ್ಟು ಬಂದ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಸಂಜೆ ವೇಳೆಗೆ ಸ್ಟೇಡಿಯಂ ಹೊರಗೆ ದೊಡ್ಡ ಸರದಿಸಾಲಿನಲ್ಲಿ ನಿಂತು ಟಿಕೆಟ್ ಪಡೆದರು. ಸ್ಟೇಡಿಯಂನ ಎಲ್ಲ ಟಿಕೆಟ್‌ಗಳು ಮಾರಾಟವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News