ಮಹಿಳಾ ಏಶ್ಯಾ ಕಪ್ :ಭಾರತಕ್ಕೆ ಸತತ 2ನೇ ಗೆಲುವು

Update: 2018-06-04 18:20 GMT

ಕೌಲಾಲಂಪುರ, ಜೂ.4: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಸೋಮವಾರ ನಡೆದ ಏಶ್ಯಾಕಪ್ ಟ್ವೆಂಟಿ-20 ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 66 ರನ್‌ಗಳಿಂದ ಮಣಿಸಿತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು. ಗೆಲ್ಲಲು 133 ರನ್ ಗುರಿ ಪಡೆದಿದ್ದ ಥಾಯ್ಲೆಂಡ್ ತಂಡವನ್ನು 8 ವಿಕೆಟ್‌ಗಳ ನಷ್ಟಕ್ಕೆ 66 ರನ್‌ಗೆ ನಿಯಂತ್ರಿಸಿ ಟೂರ್ನಿಯಲ್ಲಿ ಸತತ ಎರಡನೇ ಬಾರಿ ದೊಡ್ಡ ಅಂತರದ ಜಯ ದಾಖಲಿಸಿತು. ಈ ಮೂಲಕ ಆರು ದೇಶಗಳು ಭಾಗವಹಿಸುತ್ತಿರುವ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿತು.

 ಭಾರತ ತಂಡ ರವಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾವನ್ನು 142 ರನ್‌ಗಳಿಂದ ಮಣಿಸಿತ್ತು. ಥಾಯ್ಲೆಂಡ್ ವಿರುದ್ಧ ಭಾರತದ ಎಲ್ಲ ಅಗ್ರ ಕ್ರಮಾಂಕದ ಆಟಗಾರ್ತಿಯರು ಕಾಣಿಕೆ ನೀಡಿದ್ದಾರೆ. ಮೋನಾ ಮೆಶ್ರಾಮ್(45 ಎಸೆತ, 32 ರನ್) ಗರಿಷ್ಠ ಸ್ಕೋರ್ ಗಳಿಸಿದರು. ಫಾರ್ಮ್‌ನಲ್ಲಿರುವ ಆಟಗಾರ್ತಿ ಕೌರ್ 17 ಎಸೆತಗಳಲ್ಲಿ ಔಟಾಗದೆ 27 ರನ್ ಗಳಿಸಿದರು. ಇದರಲ್ಲಿ ಮೂರು ಬೌಂಡರಿಗಳಿವೆ. ಸ್ಮತಿ ಮಂಧಾನ 22 ಎಸೆತಗಳಲ್ಲಿ 29 ರನ್ ಗಳಿಸಿ ಉತ್ತಮ ಫಾರ್ಮ್ ಮುಂದುವರಿಸಿದರು.ಕೌರ್ ಬೌಲಿಂಗ್‌ನಲ್ಲೂ ಮಿಂಚಿದರು. ಆಫ್-ಸ್ಪಿನ್ ಬೌಲಿಂಗ್‌ನಲ್ಲಿ 3 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ ಕೌರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಥಾಯ್ಲೆಂಡ್ ಪರ ನಟ್ಟಾಯ ಬೂಚಥಂ 40 ಎಸೆತಗಳಲ್ಲಿ 21 ರನ್ ಗಳಿಸಿದರು. ಆದರೆ, ಅವರ ನಿಧಾನಗತಿಯ ಬ್ಯಾಟಿಂಗ್ ತಂಡಕ್ಕೆ ದುಬಾರಿಯಾಯಿತು.

ಭಾರತದ ಕರಾರುವಾಕ್ ಬೌಲಿಂಗ್ ಎದುರು ಥಾಯ್ಲೆಂಡ್ ತಂಡಕ್ಕೆ ಸರಾಗವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಮಂಗಳವಾರ ವಿಶ್ರಾಂತಿ ಪಡೆಯಲಿರುವ ಭಾರತ ಟೂರ್ನಮೆಂಟ್‌ನ ತನ್ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News