ಗೌರಿ ಲಂಕೇಶ್, ಭೌಮಿಕ್ ಸಹಿತ 18 ಪತ್ರಕರ್ತರಿಗೆ ಅಮೆರಿಕದ ‘ನ್ಯೂಸಿಯಂ ಗೌರವ’

Update: 2018-06-05 14:11 GMT

ಹೊಸದಿಲ್ಲಿ, ಜೂ.5: ವಾಷಿಂಗ್ಟನ್‌ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಭಾರತದ ಇಬ್ಬರು ಪತ್ರಕರ್ತರಾದ ಗೌರಿ ಲಂಕೇಶ್ ಮತ್ತು ಸುದೀಪ್ ದತ್ತ ಭೌಮಿಕ್ ಸಹಿತ ಒಟ್ಟು 18 ಪತ್ರಕರ್ತರನ್ನು ಪ್ರತಿಷ್ಠಿತ ನ್ಯೂಸಿಯಂ ಸ್ಮಾರಕದ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ನ್ಯೂಸಿಯಂ ವಸ್ತುಸಂಗ್ರಹಾಲಯ ಪತ್ರಿಕಾ ಸ್ವಾತಂತ್ರ್ಯದ ಮಹತ್ವಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕರ್ತವ್ಯ ನಿರ್ವಹಿಸುತ್ತಿರುವಾಗ ಮೃತಪಟ್ಟ ವಿಶ್ವದಾದ್ಯಂತದ ಪತ್ರಕರ್ತರ (ವರದಿಗಾರರು, ಸಂಪಾದಕರು, ಛಾಯಾಚಿತ್ರಗ್ರಾಹಕರು) ಹೆಸರನ್ನು ಎರಡು ಅಂತಸ್ತಿನ ಗಾಜಿನ ಸ್ಮಾರಕದಲ್ಲಿ ಸೇರಿಸಲಾಗುತ್ತದೆ. ಈಗ ಒಟ್ಟು 2,323 ಪತ್ರಕರ್ತರ ಹೆಸರಿದ್ದು ಇವರಲ್ಲಿ 80ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರು ಸೇರಿದ್ದಾರೆ. ಈ ವರ್ಷ 18 ಮಂದಿ ಪತ್ರಕರ್ತರ ಹೆಸರು ಸೇರಿಸಲಾಗಿದ್ದು ಇವರಲ್ಲಿ 8 ಮಹಿಳಾ ಪತ್ರಕರ್ತರು.

 ಜಾತಿ ವ್ಯವಸ್ಥೆ ಹಾಗೂ ವಿರುದ್ಧ ಲೇಖನ ಬರೆಯುತ್ತಿದ್ದ 55 ವರ್ಷದ ಗೌರಿ ಲಂಕೇಶ್ ದೇಶದಾದ್ಯಂತ ಗಮನ ಸೆಳೆದಿದ್ದರು ಎಂದು ಗೌರಿ ಲಂಕೇಶ್ ಕುರಿತು ಸಂಕ್ಷಿಪ್ತ ವಿವರಣೆಯಲ್ಲಿ ತಿಳಿಸಲಾಗಿದೆ. ತಮ್ಮ ಒಡೆತನದ ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿಯಾಗಿದ್ದ ಗೌರಿ ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದರು. ಪ್ರಧಾನಿ ಮೋದಿ ಹಾಗೂ ಅವರ ಹಿಂದೂ ರಾಷ್ಟ್ರೀಯತಾವಾದಿ ಅಜೆಂಡಾದ ಬಗ್ಗೆ ಆಗಿಂದಾಗ್ಗೆ ಟೀಕಿಸುತ್ತಿದ್ದರು. 2017ರ ಸೆ.5ರಂದು ಬೆಂಗಳೂರಿನಲ್ಲಿ ಇವರ ನಿವಾಸದ ಬಳಿಯೇ ಬೈಕ್‌ನಲ್ಲಿ ಆಗಮಿಸಿದ್ದ ವ್ಯಕ್ತಿಗಳು ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿದ್ದರು. ಈ ಹತ್ಯೆಯನ್ನು ವಿರೋಧಿಸಿ ದೇಶದಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು ಮತ್ತು ಹತ್ಯೆ ಸಂಬಂಧ ಓರ್ವನನ್ನು ಬಂಧಿಸಲಾಗಿದೆ ಎಂದು ನ್ಯೂಸಿಯಂನ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತ್ರಿಪುರದ ಸ್ಥಳೀಯ ದಿನಪತ್ರಿಕೆಯೊಂದರ ಉದ್ಯೋಗಿಯಾಗಿದ್ದ ಸುದೀಪ್ ದತ್ತ ಭೌಮಿಕ್ ತಮ್ಮ ಪತ್ರಿಕೆಯಲ್ಲಿ ಪೊಲೀಸರ ಭ್ರಷ್ಟಾಚಾರದ ಬಗ್ಗೆ ಲೇಖನ ಪ್ರಕಟಿಸಿದ್ದು ಅವರ ಹತ್ಯೆಗೆ ಕಾರಣವಾಗಿದೆ ಎಂದು ನ್ಯೂಸಿಯಂ ತಿಳಿಸಿದೆ. ಸ್ಥಳೀಯ ಅರೆಸೇನಾ ಪಡೆಯ ಮುಖ್ಯಸ್ಥರಾಗಿದ್ದ ತಪನ್ ದೆಬರ್ಮರ ಸೂಚನೆ ಮೇರೆಗೆ ಅವರನ್ನು ಭೇಟಿ ಮಾಡಿದ್ದ ಭೌಮಿಕ್, ಅರೆಸೇನಾ ಪಡೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ ಒಂದು ವಾರದ ಬಳಿಕ ತಮ್ಮ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಭೌಮಿಕ್‌ರ ಜೊತೆ ಮಾತಿನ ಚಕಮಕಿ ನಡೆಸಿದ್ದ ದೆಬರ್ಮ, ಭೌಮಿಕ್ ಮೇಲೆ ಗುಂಡು ಹಾರಿಸುವಂತೆ ತನ್ನ ಅಂಗರಕ್ಷನಿಗೆ ಸೂಚಿಸಿದ್ದ. ಆತ ಹಾರಿಸಿದ ಗುಂಡಿಗೆ ಭೌಮಿಕ್ ಸ್ಥಳದಲ್ಲೇ ಬಲಿಯಾಗಿದ್ದರು . ಭೂಮಿಕ್ ಹತ್ಯೆ ಪ್ರಕರಣದಲ್ಲಿ ದೆಬರ್ಮ ಮತ್ತು ಅಂಗರಕ್ಷಕನನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ನ್ಯೂಸಿಯಂನ ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಮಾಲ್ದೀವ್ಸ್‌ನ ‘ದಿ ಡೈಲಿ ಪ್ಯಾನಿಕ್’ ಪತ್ರಿಕೆಯ ಯಮೀನ್ ರಶೀದ್ ನ್ಯೂಸಿಯಂ ಗೌರವ ಪಡೆದಿರುವ ದಕ್ಷಿಣ ಏಶ್ಯಾದ ಮತ್ತೋರ್ವ ಪತ್ರಕರ್ತರಾಗಿದ್ದಾರೆ. ಈ ವರ್ಷ ಗೌರವಕ್ಕೆ ಪಾತ್ರರಾಗಿರುವ ಎಲ್ಲಾ ಪತ್ರಕರ್ತರೂ ಸುದ್ದಿಯನ್ನು ವರದಿ ಮಾಡುವಾಗ ಅಭೂತಪೂರ್ವ ಅಪಾಯವನ್ನು ಎದುರಿಸಿದ್ದರು. ಪತ್ರಿಕಾ ಸ್ವಾತಂತ್ರಕ್ಕೆ ಗಂಡಾಂತರ ಇರುವ ಅಥವಾ ಪತ್ರಿಕಾ ಸ್ವಾತಂತ್ರ ಅಸ್ತಿತ್ವದಲ್ಲೇ ಇಲ್ಲದ ದೇಶದಲ್ಲಿ ಹಲವು ಬಾರಿ ಇವರು ಕಾರ್ಯನಿರ್ವಹಿಸಿದ್ದರು ಎಂದು ‘ದಿ ಫ್ರೀಡಂ ಫೋರಂ ಇನ್‌ಸ್ಟಿಟ್ಯೂಟ್’ನ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥಿ ಟ್ರಾಸ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News