×
Ad

ಈಶಾನ್ಯ ಭಾರತೀಯರು ಎದುರಿಸುತ್ತಿರುವ ಜನಾಂಗೀಯ ತಾರತಮ್ಯ ಪರಿಶೀಲನೆಗೆ ಸಮಿತಿ

Update: 2018-06-07 19:41 IST

ಹೊಸದಿಲ್ಲಿ, ಜೂ.7: ದೇಶದ ವಿವಿಧ ಭಾಗಗಳಲ್ಲಿ ವಾಸವಾಗಿರುವ ಈಶಾನ್ಯ ಭಾರತದ ಜನರು ಎದುರಿಸುತ್ತಿರುವ ಜನಾಂಗೀಯ ತಾರತಮ್ಯದ ಮೇಲೆ ನಿಗಾಯಿರಿಸಲು ಮತ್ತು ಅವರ ದೂರುಗಳನ್ನು ಬಗೆಹರಿಸಲು ಮೂವರು ಸದಸ್ಯರ ಸಮಿತಿಯೊಂದನ್ನು ಕೇಂದ್ರ ಸರಕಾರವು ರಚಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ(ಈಶಾನ್ಯ) ಸತ್ಯೇಂದ್ರ ಗರ್ಗ್,ದಿಲ್ಲಿಯ ನಾರ್ಥ್‌ಈಸ್ಟ್ ಸಪೋರ್ಟ್ ಸೆಂಟರ್‌ನ ಕಾರ್ಯದರ್ಶಿ ಅಲನಾ ಗೋಲ್ಮೀ ಮತ್ತು ದಿಲ್ಲಿ ವಿವಿಯ ಕಾನೂನು ವಿಭಾಗದ ಸಹಾಯಕ ಪ್ರೊಫೆಸರ್ ಮಿಝುಂ ನ್ಯೋಡು ಅವರು ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಸಚಿವಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ದೇಶದ ಯಾವುದೇ ಭಾಗದಲ್ಲಿ ಜನಾಂಗೀಯ ದೂಷಣೆ,ಜನಾಂಗೀಯ ದೌರ್ಜನ್ಯ,ಜನಾಂಗೀಯ ಹಿಂಸೆ ಮತ್ತು ಜನಾಂಗೀಯ ತಾರತಮ್ಯದ ಯಾವುದೇ ಕೃತ್ಯಕ್ಕೆ ಗುರಿಯಾಗುವ ಈಶಾನ್ಯ ರಾಜ್ಯಗಳ ಯಾವುದೇ ವ್ಯಕ್ತಿ ಅಥವಾ ಗುಂಪು ತನ್ನ ದೂರುಗಳು,ಸಲಹೆಗಳನ್ನು ಸಮಿತಿಗೆ ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ.

 ದಿಲ್ಲಿಯಲ್ಲಿ ಅರುಣಾಚಲ ಪ್ರದೇಶದ ವಿದ್ಯಾರ್ಥಿ ನಿಡೊ ತಾನಿಯಾ ಸಾವು ಸೇರಿದಂತೆ ಈಶಾನ್ಯ ಭಾರತೀಯರ ಮೇಲಿನ ಸರಣಿ ಹಲ್ಲೆಗಳ ಹಿನ್ನೆಲೆಯಲ್ಲಿ ರಿಟ್ ಅರ್ಜಿಯೊಂದು ದಾಖಲಾದ ಬಳಿಕ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರ ಈ ಸಮಿತಿಯನ್ನು ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News