ಐಟಿಐಗೆ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಶಿಫಾರಸು
ಹೊಸದಿಲ್ಲಿ, ಜೂ.7: ಐಸಿಎಸ್‌ಇ ಹಾಗೂ ಸಿಬಿಎಸ್‌ಇ ರೀತಿಯಲ್ಲಿ ಐಟಿಐ(ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್)ಗೂ ಪ್ರತ್ಯೇಕ ಮಂಡಳಿ ಸ್ಥಾಪನೆಯಾಗುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರತ್ಯೇಕ ಮಂಡಳಿ ಸ್ಥಾಪನೆಯಾದರೆ ಐಟಿಐ ಪದವೀಧರರಿಗೆ ಇತರ ಶಾಲೆ ಮತ್ತು ಕಾಲೇಜುಗಳಲ್ಲಿ ನಿಯಮಿತ (ರೆಗ್ಯುಲರ್) ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಮಂಡಳಿ ನೀಡುವ ಪ್ರಮಾಣಪತ್ರವು ಐಸಿಎಸ್‌ಇ ಮತ್ತು ಸಿಬಿಎಸ್‌ಇ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ನೀಡುವ ಪ್ರಮಾಣಪತ್ರಕ್ಕೆ ಸಮಾನವಾಗಿರುತ್ತದೆ. ಪ್ರತೀ ವರ್ಷ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಐಟಿಐ ತೇರ್ಗಡೆಯಾಗುತ್ತಿದ್ದು ಇವರ ಅಂಕಪಟ್ಟಿ ಪರಿಷ್ಕರಣೆ, ಪ್ರಮಾಣ ಪತ್ರ ನೀಡುವುದು ಮುಂತಾದ ಕಾರ್ಯಗಳನ್ನು ಮಂಡಳಿ ನಿರ್ವಹಿಸಲಿದೆ . ಮಂಡಳಿ ಸ್ಥಾಪನೆಯ ಕುರಿತ ಟಿಪ್ಪಣಿ ಸಿದ್ಧವಾಗಿದ್ದು ಸರಕಾರದ ವಿವಿಧ ಇಲಾಖೆಗಳೊಡನೆ ಸಮಾಲೋಚನೆ ನಡೆಸಿದ ಬಳಿಕ ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಒಂದು ತಿಂಗಳಲ್ಲಿ ಅನುಮೋದನೆ ದೊರಕುವ ನಿರೀಕ್ಷೆಯಿದೆ ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಮೂಲಗಳು ತಿಳಿಸಿವೆ.
ಹೊಸ ಮಂಡಳಿ ಸ್ಥಾಪನೆಯ ಪ್ರಸ್ತಾವನೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸ್ವೀಕರಿಸಿದೆ ಎಂದು ಸಚಿವಾಲಯ ತಿಳಿಸಿದೆ.