ಕೇಂದ್ರ ಸರಕಾರಿ ಇಲಾಖೆಯಲ್ಲಿ ಹಿಂದುಳಿದ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯವಿಲ್ಲ ಎಂದ ಬಿಜೆಪಿ ಸಂಸದ

Update: 2018-06-07 15:06 GMT

ಹೊಸದಿಲ್ಲಿ, ಜೂ.7: ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಸರಕಾರಿ ಹುದ್ದೆಯಲ್ಲಿ ಭಡ್ತಿ ಮೀಸಲಾತಿಗೆ ಅವಕಾಶ ನೀಡುವ ಸುಪ್ರೀಂಕೋರ್ಟ್‌ನ ಆದೇಶವನ್ನು ಸ್ವಾಗತಿಸಿರುವ ಬಿಜೆಪಿ ಸಂಸದ ಉದಿತ್ ರಾಜ್, ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಈ ಸಮುದಾಯದವರಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರದಲ್ಲಿ ಎಸ್‌ಸಿ ಸಮುದಾಯಕ್ಕೆ ಸೇರಿದ ಒಬ್ಬ ಹಾಗೂ ಎಸ್‌ಟಿ ಸಮುದಾಯದ ಮೂವರು ಕಾರ್ಯದರ್ಶಿಗಳು ಮಾತ್ರ ಇದ್ದಾರೆ ಎಂಬ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ವರದಿಯನ್ನು ಉಲ್ಲೇಖಿಸಿದ ದಿಲ್ಲಿಯ ಸಂಸದ ಉದಿತ್ ರಾಜ್, ಅಲ್ಲದೆ ಎಸ್‌ಸಿ ಸಮುದಾಯಕ್ಕೆ ಸೇರಿದ ಸಹಾಯಕ ಮತ್ತು ಜಂಟಿ ಕಾರ್ಯದರ್ಶಿಗಳ ಸಂಖ್ಯೆಯೂ ಅನುಕ್ರಮವಾಗಿ 3 ಮತ್ತು 17 ಆಗಿದ್ದರೆ, ಎಸ್‌ಟಿ ಸಮುದಾಯಕ್ಕೆ ಸೇರಿದ ಸಹಾಯಕ ಮತ್ತು ಜಂಟಿ ಕಾರ್ಯದರ್ಶಿಗಳ ಸಂಖ್ಯೆ ಅನುಕ್ರಮವಾಗಿ 17 ಮತ್ತು 9 ಆಗಿದೆ ಎಂದು ತಿಳಿಸಿದರು.

ಎಸ್‌ಸಿ/ ಎಸ್‌ಟಿ ಸಮುದಾಯದವರಿಗೆ ಎಲ್ಲಾ ರಾಜಕೀಯ ಪಕ್ಷಗಳ ಬೆಂಬಲವಿದ್ದರೂ ಯೋಜನೆ ಅನುಷ್ಠಾನಗೊಳ್ಳುವಾಗ ಅಡೆತಡೆ ಬರುತ್ತಿರುವುದು ವಿಷಾದನೀಯ ಎಂದರು. ಮೀಸಲಾತಿಯನ್ನು ಕಾರ್ಯಾದೇಶದ ಮೂಲಕ ಜಾರಿಗೊಳಿಸಲಾಗುತ್ತದೆ ಮತ್ತು ಇದರಲ್ಲಿ ಬದಲಾವಣೆಗೆ ಆಸ್ಪದ ನೀಡುತ್ತಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದ ಅವರು, ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಸರಕಾರಿ ಉದ್ಯೋಗದಲ್ಲಿ ಉತ್ತಮ ನಿರ್ವಹಣೆ ತೋರುವುದಿಲ್ಲ ಎಂಬ ಕಲ್ಪನೆ ಸರಿಯಲ್ಲ. ಹಾಲಿ ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ಉತ್ಪಾದಕತೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಗಳೇ ತಿಳಿಸುತ್ತವೆ ಎಂದು ತಿಳಿಸಿದರು. ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಗ್ರೂಫ್ ಬಿ ವಿಭಾಗದ ಒಟ್ಟು 2,90,941 ಸಿಬಂದಿಗಳಲ್ಲಿ ಎಸ್‌ಸಿ- 46,625, ಎಸ್‌ಟಿ-20,915, ಒಬಿಸಿ-42,995, ಇತರ- 1,80,406 ಸಿಬ್ಬಂದಿಗಳಿದ್ದಾರೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News