×
Ad

ಕುಖ್ಯಾತ ದರೋಡೆಕೋರ ಸಂಪತ್ ನೆಹ್ರಾ ಬಂಧನ

Update: 2018-06-07 20:48 IST

ಚಂಡೀಗಢ, ಜೂ.7: 24ಕ್ಕೂ ಹೆಚ್ಚು ಕೊಲೆ, ಅಪಹರಣ, ಸುಪಾರಿ ಕೊಲೆ ಮುಂತಾದ ಪಾತಕಕೃತ್ಯದಲ್ಲಿ ಶಾಮೀಲಾಗಿದ್ದ ಕುಖ್ಯಾತ ದರೋಡೆಕೋರ ಸಂಪತ್ ನೆಹ್ರಾ ಎಂಬಾತನನ್ನು ಹೈದರಾಬಾದ್‌ನಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ‘ಮೋಸ್ಟ್ ವಾಂಟೆಡ್’ ಪಾತಕಿಯಾಗಿರುವ 28ರ ಹರೆಯದ ನೆಹ್ರಾನ ತಲೆಗೆ ನಗದು ಬಹುಮಾನ ಘೋಷಿಸಲಾಗಿತ್ತು. ಹರ್ಯಾಣ, ಪಂಜಾಬ್, ರಾಜಸ್ತಾನ ಮತ್ತು ಚಂಡೀಗಢದಲ್ಲಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ರಾಜಸ್ತಾನ ಮೂಲದ ನೆಹ್ರಾ, ಮತ್ತೋರ್ವ ಪಾತಕಿ ಲಾರೆನ್ಸ್ ಬಿಷ್ಣೋಯಿ ತಂಡದ ಶಾರ್ಪ್‌ಶೂಟರ್ ಆಗಿ ಕಾರ್ಯ ನಿರ್ವಹಿಸಿದ್ದ.

ಕುಖ್ಯಾತಿ ಪಡೆದಿರುವ ಬಿಷ್ಣೋಯಿ ತಂಡ ಈ ಹಿಂದೆ ಸಲ್ಮಾನ್ ಖಾನ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತ್ತು. ತಮ್ಮ ಸಹಚರ ದೀಪಕ್ ಎಂಬಾತನನ್ನು ಪೊಲೀಸ್ ಕಸ್ಟಡಿಯಿಂದ ಬಿಡಿಸಲು ಪೊಲೀಸರ ಮೇಲೆಯೇ ಗುಂಡು ಹಾರಿಸಿರುವ ಪ್ರಕರಣ, ಚಂಡೀಗಢದ ಉದ್ಯಮಿಯಿಂದ 3 ಕೋಟಿ ರೂ. ಹಫ್ತಾ ವಸೂಲಿಗೆ ಒತ್ತಡ ಹೇರಿದ್ದು, ಐಎನ್‌ಎಲ್‌ಡಿ ಪಕ್ಷದ ಮುಖಂಡನ ಸಹೋದರನ ಕೊಲೆ ಯತ್ನ, ಬಂದೂಕಿನಿಂದ ಬೆದರಿಸಿ ವ್ಯಕ್ತಿಯೋರ್ವನನ್ನು ಲೂಟಿ ಮಾಡಿ ಬಳಿಕ ಕೊಲೆ ಮಾಡಿದ ಪ್ರಕರಣದಲ್ಲಿ ನೆಹ್ರಾ ಮತ್ತು ಆತನ ತಂಡ ಒಳಗೊಂಡಿದೆ. ಈತನನ್ನು ಬುಧವಾರ ಹರ್ಯಾಣ ಪೊಲೀಸ್ ಪಡೆಯ ವಿಶೇಷ ಕಾರ್ಯಪಡೆ ತಂಡ (ಎಸ್‌ಟಿಎಫ್) ಹೈದರಾಬಾದ್‌ನಲ್ಲಿ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News