ಮಾಧ್ಯಮ ವರದಿಗಳಲ್ಲಿ 'ದಲಿತ' ಪದ ಬಳಕೆಗೆ ಬಾಂಬೆ ಹೈಕೋರ್ಟ್ ಅಂಕುಶ

Update: 2018-06-07 17:18 GMT

ಹೊಸದಿಲ್ಲಿ,ಜೂ.7: ತಮ್ಮ ವರದಿಗಳಲ್ಲಿ 'ದಲಿತ' ಪದವನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ದೇಶಗಳನ್ನು ಹೊರಡಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತೀಯ ಪತ್ರಿಕಾ ಮಂಡಳಿ(ಪಿಸಿಐ)ಗೆ ಸೂಚಿಸಿದೆ.

'ದಲಿತ' ಪದದ ಬದಲಿಗೆ 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ' ಎಂಬ ಪದಗಳನ್ನು ಬಳಸುವಂತೆ ಸೂಚಿಸಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮಾ.15ರಂದು ಹೊರಡಿಸಿದ್ದ ಸುತ್ತೋಲೆಯನ್ನು ಜಾರಿಗೊಳಿಸುವಂತೆಯೂ ನ್ಯಾಯಮೂರ್ತಿಗಳಾದ ಝಕಾ ಹಕ್ ಮತ್ತು ಭೂಷಣ ಧರ್ಮಾಧಿಕಾರಿ ಅವರ ವಿಭಾಗೀಯ ಪೀಠವು ತಿಳಿಸಿದೆ.

 ಈ ಸುತ್ತೋಲೆಯ ಹಿನ್ನೆಲೆಯಲ್ಲಿ ಎನ್‌ಡಿಎ ಸರಕಾರವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ನಾಗರಿಕರನ್ನು 'ದಲಿತ'ರೆಂದು ಸಂಬೋಧಿಸದಂತೆ ಎಲ್ಲ ರಾಜ್ಯ ಮತ್ತು ಕೇಂದ್ರ ಸರಕಾರಿ ಇಲಾಖೆಗಳಿಗೆ ಸೂಚಿಸಿತ್ತು. ಸರ್ವೋಚ್ಚ ನ್ಯಾಯಾಲಯವು ಎಸ್‌ಸಿ/ಎಸ್‌ಟಿ ಕಾಯ್ದೆಗೆ ತಿದ್ದುಪಡಿ ತರುವ ಕೆಲವೇ ದಿನಗಳ ಮೊದಲು ಹೊರಡಿಸಲಾಗಿದ್ದ ಪತ್ರದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ 2018, ಜ.15ರ ತೀರ್ಪನ್ನು ಉಲ್ಲೇಖಿಸಲಾಗಿತ್ತು.

ಭಾರತೀಯ ಸಂವಿಧಾನ ಅಥವಾ ಇತರ ಯಾವುದೇ ಶಾಸನದಲ್ಲಿ 'ದಲಿತ' ಶಬ್ಧದ ಉಲ್ಲೇಖವಿಲ್ಲದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಅವುಗಳ ಅಧಿಕಾರಿಗಳು ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದ ನಾಗರಿಕರಿಗೆ ಆ ಶಬ್ಧವನ್ನು ಬಳಸಕೂಡದು ಎಂದು ಈ ತೀರ್ಪು ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News