ತಲೆ ತುಂಡಾದ ಮೇಲೂ ತನ್ನನ್ನು ಕೊಂದವನಿಗೆ ಕಚ್ಚಿದ ಹಾವು!
ಟೆಕ್ಸಾಸ್, ಜೂ.8: ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ತನ್ನ ತೋಟದಲ್ಲಿದ್ದ ಹಾವೊಂದನ್ನು ವ್ಯಕ್ತಿಯೊಬ್ಬ ಸಲಾಕೆಯಿಂದ ಹೊಡೆದು ಅದರ ತಲೆಯನ್ನು ತುಂಡರಿಸಿದ್ದ. ಆದರೆ ಸ್ವಲ್ಪ ಹೊತ್ತಿನಲ್ಲೇ ಆ ಹಾವು ತನ್ನ ತುಂಡರಿಸಲ್ಪಟ್ಟ ತಲೆಯಿಂದಲೇ ಆತನಿಗೆ ಬಲವಾಗಿ ಕಚ್ಚಿದ ಪರಿಣಾಮ ಆತ 26 ಡೋಸ್ ವಿಷ ನಿವಾರಕ ಚುಚ್ಚುಮದ್ದು ತೆಗೆದುಕೊಳ್ಳುವ ಅನಿವಾರ್ಯತೆ ಎದುರಿಸಿದ್ದಾನೆ.
ಮೇ 27ರಂದ ಜೆನ್ನಿಫರ್ ಸುಟಕ್ಲಿಫ್ ಎಂಬ ಮಹಿಳೆ ತನ್ನ ಮನೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ನಾಲ್ಕು ಅಡಿ ಉದ್ದದ ಹಾವನ್ನು ನೋಡಿ ತನ್ನ ಪತಿಯನ್ನು ಕೂಗಿ ಕರೆದಿದ್ದಾಳೆ. ಆತ ಅಲ್ಲಿಗೆ ಧಾವಿಸಿ ಬಂದು ಸಲಾಕೆಯಿಂದ ಹೊಡೆದು ಹಾವನ್ನು ತುಂಡರಿಸಿದ್ದು, ಕೆಲ ಕ್ಷಣದ ನಂತರ ಹಾವಿನ ದೇಹವನ್ನು ಅಲ್ಲಿಂದ ಸಾಗಿಸಬೇಕೆನ್ನುವಷ್ಟರಲ್ಲಿ ಆ ಹಾವು ತುಂಡಾದ ತಲೆಯ ಭಾಗದಿಂದ ಆತನನ್ನು ಬಲವಾಗಿ ಕಚ್ಚಿತ್ತು.
ನಾಗರ ಹಾವು ಮತ್ತು ರ್ಯಾಟಲ್ ಹಾವುಗಳ ಮಿದುಳು ಅವುಗಳು ಸತ್ತ ನಂತರವೂ ಹಲವು ಗಂಟೆಗಳ ಕಾಲ ಸಕ್ರಿಯವಾಗಿರುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಹಾವಿನ ತಲೆ ಕತ್ತರಿಸಲ್ಪಟ್ಟಿದ್ದರಿಂದ ಅದು ಬಹಳಷ್ಟು ಪ್ರಮಾಣದಲ್ಲಿ ವಿಷವನ್ನು ಕಾರಿತ್ತೆನ್ನಲಾಗಿದೆ. ಆ ವ್ಯಕ್ತಿಗೆ ಕೂಡಲೇ ಫಿಟ್ಸ್ ಉಂಟಾಗಿ, ಆತ ದೃಷ್ಟಿ ಕಳೆದುಕೊಂಡನಲ್ಲದೆ ಆಂತರಿಕ ರಕ್ತಸ್ರಾವಕ್ಕೂ ಒಳಗಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.