ವಿಮಾನನಿಲ್ದಾಣದ ಬಳಿ ಗುರುತಿಸಲಾಗದ ಹಾರುವ ವಸ್ತು ಕಂಡುಬಂದರೆ ಹೊಡೆದುರುಳಿಸಲು ಸೂಚನೆ

Update: 2018-06-08 16:19 GMT

ಹೊಸದಿಲ್ಲಿ, ಜೂ.8: ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಗುರುತಿಸಲಾಗದ ಹಾರುವ ವಸ್ತು(ಯುಎಫ್‌ಒ)ಗಳು ಕಂಡುಬಂದರೆ ಅವನ್ನು ಹೊಡೆದುರುಳಿಸಲು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(ಸಿಐಎಸ್‌ಎಫ್) ಹಾಗೂ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಗೆ ಸೂಚನೆ ನೀಡಲಾಗಿದೆ.

ವಿಮಾನ ನಿಲ್ದಾಣದ ಬಳಿ ಯುಎಫ್‌ಒ ಹಾರಾಟದ ಪ್ರಕರಣ ಈ ಹಿಂದೆ ಹಲವು ಬಾರಿ ನಡೆದಿರುವ ಕಾರಣ ಈ ಬಗ್ಗೆ ಚರ್ಚಿಸಲು ಗೃಹ ಸಚಿವಾಲಯ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಯುಎಫ್‌ಒಗಳನ್ನು ಹೊಡೆದುರುಳಿಸಲು ಸೂಚನೆ ನೀಡಿದೆ. ಹಾರುವ ವಸ್ತು ಎಂದರೆ ಅನ್ಯಗೃಹದ ಜೀವಿಗಳ ವಾಹನವಾದ ಹಾರುವ ತಟ್ಟೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಬಲೂನ್‌ಗಳು, ಡ್ರೋನ್ ವಿಮಾನ ಇತ್ಯಾದಿಗಳನ್ನು ಹಾರುವ ವಸ್ತು ಎಂದು ಪರಿಗಣಿಸಲಾಗುತ್ತದೆ. ದಿಲ್ಲಿ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಲು ಮಾರ್ಚ್‌ನಲ್ಲಿ ನಡೆದ ಸಭೆಯಲ್ಲಿ ಹಾರುವ ವಸ್ತುಗಳ ಕುರಿತಾದ ನಿಯಮದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಇಂತಹ ವಸ್ತುಗಳನ್ನು ಹೊಡೆದುರುಳಿಸಲು ಸಿಐಎಸ್‌ಎಫ್ ಹಾಗೂ ಎನ್‌ಎಸ್‌ಜಿಗೆ ಅಧಿಕಾರ ನೀಡುವ ನಿಯಮವನ್ನು ಜಾರಿಗೊಳಿಸುವ ಬಗ್ಗೆ ಗೃಹ ಸಚಿವಾಲಯ ಪರಿಶೀಲಿಸುತ್ತಿದೆ ಎಂದು ಹಿರಿಯ ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ನಾಗರಿಕ ವಿಮಾನಯಾನ ಕಾರ್ಯಾಲಯದ ಅಧಿಕಾರಿಗಳು, ನಾಗರಿಕ ವಿಮಾನಯಾನ ಮಹಾನಿರ್ದೇಶಕರು, ದಿಲ್ಲಿ ಪೊಲೀಸ್, ಸಿಐಎಸ್‌ಎಫ್, ಎನ್‌ಎಸ್‌ಜಿ, ದಿಲ್ಲಿ ಅಂತರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ಇತರ ಸಂಬಂಧಿತ ಸಂಸ್ಥೆಗಳು ಪರಿಶೀಲನಾ ಸಮಿತಿಯ ಸದಸ್ಯರಾಗಿದ್ದಾರೆ. ಹಾಲಿ ನಿಯಮದಂತೆ, ವಿಮಾನ ನಿಲ್ದಾಣದ ಭದ್ರತೆಗೆ ಅಪಾಯಕಾರಿ ರೀತಿಯಲ್ಲಿ ಹಾರುವ ವಸ್ತುಗಳು ಕಂಡು ಬಂದರೆ, ಸಿಐಎಸ್‌ಎಫ್ ಮತ್ತು ಎನ್‌ಎಸ್‌ಜಿ ಅಧಿಕಾರಿಗಳು ಸಂಬಂಧಿಸಿದ ಎಲ್ಲಾ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಬಳಿಕ ಆ ವಸ್ತುವನ್ನು ಗುರುತಿಸಿ ಅದನ್ನು ಕೆಳಗಿಳಿಸುವ ಮಾರ್ಗೋಪಾಯಗಳ ಬಗ್ಗೆ ನಿರ್ಧರಿಸಬೇಕು. ಆದರೆ ಪ್ರಸ್ತಾವಿತ ನಿಯಮದ ಪ್ರಕಾರ, ವಿಮಾನ ನಿಲ್ದಾಣದ ಬಳಿ ಹಾರುತ್ತಿರುವ ಗುರುತಿಸಲಾಗದ ವಸ್ತುಗಳು ಭದ್ರತೆಗೆ ಅಪಾಯ ಎಂದು ಕಂಡುಬಂದರೆ, ಈ ವಸ್ತುಗಳು ಅಪಾಯಕಾರಿ ಸ್ಫೋಟಕ ಅಥವಾ ರಾಸಾಯನಿಕ ಪದಾರ್ಥಗಳನ್ನು ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಯುಎಫ್‌ಒಗಳನ್ನು ಹೊಡೆದುರುಳಿಸಬಹುದಾಗಿದೆ.

ಕಳೆದ ಎಪ್ರಿಲ್‌ನಲ್ಲಿ ದಿಲ್ಲಿಯಿಂದ ಶ್ರೀನಗರಕ್ಕೆ ಸಂಚರಿಸುವ ಏರ್‌ಇಂಡಿಯಾ ವಿಮಾನದ ಇಂಜಿನ್‌ಗೆ ಬಲೂನ್‌ನಂತಹ ಹಾರುವ ವಸ್ತು ಸಿಕ್ಕಿಕೊಂಡ ಕಾರಣ ವಿಮಾನವು ದಿಲ್ಲಿ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನದಲ್ಲಿ 188 ಪ್ರಯಾಣಿಕರಿದ್ದರು. ಒಂದು ವೇಳೆ ಡ್ರೋನ್ ವಿಮಾನ ಅಡ್ಡಬಂದಿದ್ದರೆ ಆಗ ಗಂಭೀರ ಪ್ರಮಾಣದ ಹಾನಿ ಸಂಭವಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಇದೇ ರೀತಿ, ಕಳೆದ ಡಿಸೆಂಬರ್‌ನಲ್ಲಿ ದಿಲ್ಲಿ ವಿಮಾನನಿಲ್ದಾಣದ ಬಳಿ ಹಾರುವ ವಸ್ತು ಕಂಡು ಬಂದಿದ್ದು ಇದರಿಂದ 15 ವಿಮಾನಗಳ ಆಗಮನ-ನಿರ್ಗಮನಕ್ಕೆ ತೊಂದರೆಯಾಗಿತ್ತು. ನಂತರ ಹಾರುವ ವಸ್ತುವಿನ ಬಗ್ಗೆ ಸಮಗ್ರ ತಪಾಸಣೆ ನಡೆಸಿದರೂ ಅದು ನಿಗೂಢವಾಗಿ ನಾಪತ್ತೆಯಾಗಿತ್ತು.

ಇದಾದ ಒಂದು ವಾರದ ಬಳಿಕ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್‌ಇಂಡಿಯಾ ವಿಮಾನದ ಅತೀ ಸಮೀಪದಲ್ಲಿ ಡ್ರೋನ್‌ ನಂತಹ ವಸ್ತುವೊಂದು ಹಾರಿ ಹೋದ ಬಗ್ಗೆ ತಕ್ಷಣ ಪೈಲಟ್ ವಿಮಾನನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದಾದ ಕೆಲವೇ ಕ್ಷಣದಲ್ಲಿ ಅದೇ ನಿಲ್ದಾಣದಿಂದ ಲೇಹ್‌ನತ್ತ ಪ್ರಯಾಣ ಬೆಳೆಸಿದ ವಿಮಾನಕ್ಕೂ ಅದೇ ಡ್ರೋನ್ ಕಾಣಸಿಕ್ಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News