×
Ad

ಉತ್ತರ ಪ್ರದೇಶ: ರಸ್ತೆಗೆ ಟೊಮೆಟೊ ಸುರಿದು ರೈತರ ಪ್ರತಿಭಟನೆ

Update: 2018-06-08 23:04 IST

ಲಕ್ನೋ, ಜೂ.8: ಟೊಮೆಟೊ ರಫ್ತಿಗೆ ಹೆಸರಾಗಿರುವ ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯ ರೈತರು ಇದೀಗ ಟೊಮೆಟೊ ಬೆಲೆ ಪಾತಾಳಕ್ಕೆ ಇಳಿದಿರುವುದರಿಂದ ಹತಾಶರಾಗಿದ್ದು, ರಸ್ತೆಯ ಮೇಲೆ ಟೊಮೆಟೊಗಳನ್ನು ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ ರೈತರು, ದಾರಿಹೋಕರು ಟೊಮೆಟೊಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಕೊಂಡೊಯ್ಯಲು ಅಡ್ಡಿಪಡಿಸಲಿಲ್ಲ.

 ಬಳಿಕ ಪ್ರತಿಭಟನಾಕಾರರು ಜಿಲ್ಲಾ ದಂಡಾಧಿಕಾರಿಯ ಕಚೇರಿಗೆ ತೆರಳಿ ಅವರಿಗೆ 2 ಕಿ.ಗ್ರಾಂ. ಟೊಮೆಟೊಗಳನ್ನು ಕೊಡುಗೆ ನೀಡಿದರು. ಟೊಮೆಟೊಗೆ ಸ್ಥಳೀಯ ಮಂಡಿ(ಮಾರುಕಟ್ಟೆ)ಯಲ್ಲಿ ದೊರೆಯುತ್ತಿರುವ ದರ ಕನಿಷ್ಟವಾಗಿದ್ದು, ಟೊಮೆಟೊ ಉತ್ಪನ್ನ ಹಾಗೂ ಸಾಗಣೆ ವೆಚ್ಚ ಕೂಡಾ ದೊರಕುವುದಿಲ್ಲ. ತಕ್ಷಣ ಸರಕಾರ ಮಧ್ಯಪ್ರವೇಶಿಸಿ ಟೊಮೆಟೊಗಳನ್ನು ಜಿಲ್ಲೆಯಿಂದ ಹೊರಗೆ ಸಾಗಿಸಿ ಅಧಿಕ ಬೆಲೆಗೆ ಮಾರುತ್ತಿರುವ ಮಧ್ಯವರ್ತಿಗಳನ್ನು ನಿಯಂತ್ರಿಸಬೇಕು. ಅಲ್ಲದೆ ಕೃಷಿ ಉತ್ಪನ್ನಗಳ ದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಸರಕಾರವನ್ನು ಒತ್ತಾಯಿಸಿದರು.

ರೈತರ ಸಮಸ್ಯೆಗಳ ಬಗ್ಗೆ ವಿವರಿಸಿದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಹರ್ಪಾಲ್ ಸಿಂಗ್, ಟೊಮೆಟೊ ಬೀಜ, ರಸಗೊಬ್ಬರ, ಕೂಲಿ, ನೀರಾವರಿ ವೆಚ್ಚ ಹಾಗೂ ಸಾಗಣೆ ವೆಚ್ಚ ಇವೆಲ್ಲಾ ಸೇರಿದರೆ ಟೊಮೆಟೊ ಉತ್ಪಾದನೆಯ ಸರಾಸರಿ ವೆಚ್ಚ ಪ್ರತೀ ಕಿ.ಗ್ರಾಂ.ಗೆ 6 ರೂ. ಆಗುತ್ತದೆ. ಆದರೆ ಅಮ್ರೋಹದ ಮಂಡಿ(ಮಾರುಕಟ್ಟೆ)ಯಲ್ಲಿ ರೈತರಿಗೆ ಈಗ ಪ್ರತೀ ಕಿ.ಗ್ರಾಂಗೆ ಕೇವಲ 1.93 ರೂ. ದೊರಕುತ್ತಿದೆ. ಮಂಡಿಯವರು ಮಧ್ಯವರ್ತಿಗಳಿಗೆ ಕಿ.ಗ್ರಾಂಗೆ ಕನಿಷ್ಟ 5 ರೂ. ಲಾಭ ಇರಿಸಿ ಮಾರುತ್ತಿದ್ದಾರೆ. ಮಧ್ಯವರ್ತಿಗಳು ಟೊಮೆಟೊವನ್ನು ಹೊರ ಜಿಲ್ಲೆಗೆ ಸಾಗಿಸಿ ಮಾರುಕಟ್ಟೆಯಲ್ಲಿ ಕಿ.ಗ್ರಾಂಗೆ 15 ರೂ. ಯಂತೆ ಮಾರುತ್ತಿದ್ದಾರೆ. ಹೀಗೆ ಟೊಮೆಟೊ ಬೆಳೆದ ರೈತರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಲಾಭ ಗಳಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಟೊಮೆಟೊಗಳ ಅಧಿಕ ಸಂಗ್ರಹ ಹಾಗೂ ಕೆಲ ವರ್ಷಗಳಿಂದ ಟೊಮೆಟೊಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡುವುದಕ್ಕೆ ನಿಷೇಧ ಹೇರಿರುವುದು ತಮ್ಮ ಆದಾಯದ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ರೈತರು ದೂರಿದ್ದು, ತಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ರೈತರಿಗೆ ನೆರವಾಗುವುದಾಗಿ ತಿಳಿಸಿರುವ ಅಮ್ರೋಹ ಜಿಲ್ಲಾ ದಂಡಾಧಿಕಾರಿ ಹೇಮಂತ್ ಕುಮಾರ್, ರೈತರ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News