ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆ; ರಸ್ತೆಗುರುಳಿದ ಮರಗಳು

Update: 2018-06-09 05:20 GMT

ಮಂಗಳೂರು, ಜೂ.9: ಕರಾವಳಿಯಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಗಾಳಿಮಳೆಯಾಗುತ್ತಿದೆ.

ಈ ನಡುವೆ ಗಾಳಿಮಳೆಗೆ ನಗರದ ಮಾರುಕಟ್ಟೆ ಬಳಿಯ ಭವಂತಿ ಸ್ಟ್ರೀಟ್‌ನಲ್ಲಿ ಹಳೆ ಕಟ್ಟಡವೊಂದರ ಒಂದು ಪಾರ್ಶ್ವ ಕುಸಿದು ಅದರಡಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದೆ. ಇದರಿಂದ ಕೆಲವು ದ್ವಿಚಕ್ರ ವಾಹನಗಳು ಅದರಡಿ ಸಿಲುಕಿ ಜಖಂಗೊಂಡಿವೆ.

ಸುರತ್ಕಲ್ ಹೊಸಬೆಟ್ಟು ಎಂಬಲ್ಲಿ ಭಾರೀ ಮರವೊಂದು ಉರುಳಿ ಮನೆಯ ಮೇಲೆ ಬಿದ್ದಿದೆ. ಇದರಿಂದ ಮನೆಗೆ ಹಾನಿ ಉಂಟಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ನಗರ ನೆಹರೂ ಮೈದಾನದ ಎದುರು, ಆರ್‌ಟಿಒ ಕಚೇರಿ ಬಳಿ ಮರವೊಂದು ಗಾಳಿಮಳೆಗೆ ಮುರಿದು ರಸ್ತೆಗೆ ಉರುಳಿದೆ. ಇದರಿಂದ ಕೆಲಹೊತ್ತು ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಮರವನ್ನು ತೆರವುಗೊಳಿಸಲಾಗಿದೆ.

ರೈಲು ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿದ ಮರವೊಂದರ ಕೊಂಬೆ ಮುರಿದುಬಿದ್ದಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅದನ್ನು

ತೆರವುಗೊಳಿಸಿದರು.

ಮುಂಗಾರು ಬಿರುಸು ಪಡೆದುಕೊಳ್ಳುತ್ತಿದ್ದಂತೆ ಕಡಲಿನ ಅಬ್ಬರ ಜೋರಾಗಿದೆ. ಈ ನಡುವೆ ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News