ಮಧ್ಯಪ್ರದೇಶದಲ್ಲಿ ನಕಲಿ ಮತದಾರರ ಸೇರ್ಪಡೆ: ಕಾಂಗ್ರೆಸ್ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ

Update: 2018-06-09 13:18 GMT

ಹೊಸದಿಲ್ಲಿ,ಜೂ.9: ಮಧ್ಯಪ್ರದೇಶದ ಮತದಾರರ ಪಟ್ಟಿಗಳಲ್ಲಿ ಭಾರೀ ಪ್ರಮಾಣದಲ್ಲಿ ನಕಲಿ ಮತದಾರರನ್ನು ಸೇರಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ಚುನಾವಣಾ ಆಯೋಗವು ಶನಿವಾರ ತಿರಸ್ಕರಿಸಿದೆ. ಕ್ಷೇತ್ರ ಪರಿಶೀಲನೆಗಳಲ್ಲಿ ಈ ಆರೋಪವು ಸಾಬೀತಾಗಿಲ್ಲ ಎಂದು ಅದು ತಿಳಿಸಿದೆ.

ಈ ವಿಷಯವನ್ನು ಸ್ಪಷ್ಟಪಡಿಸಿ ಎಐಸಿಸಿಗೆ ಪತ್ರವನ್ನು ಬರೆದಿರುವ ಆಯೋಗವು, ಮತದಾರರ ಭಾವಚಿತ್ರಗಳು ಪುನರಾವರ್ತನೆಯಾಗಿರುವುದನ್ನು ಸರಿಪಡಿಸಲಾಗುತ್ತಿದೆ. ಆದರೆ ಮತದಾರರ ಹೆಸರುಗಳು ಪುನರಾವರ್ತನೆಯಾಗಿಲ್ಲ ಎಂದು ತಿಳಿಸಿದೆ.

 ಕಳೆದ ರವಿವಾರ ನಕಲಿ ಮತದಾರರ ಸೇರ್ಪಡೆಯ ದೂರಿನೊಂದಿಗೆ ಕಾಂಗ್ರೆಸ್ ನಿಯೋಗವೊಂದು ಚುನಾವಣಾ ಆಯೋಗವನ್ನು ಭೇಟಿಯಾಗಿದ್ದ ಬೆನ್ನಲ್ಲೇ ಆರೋಪಗಳ ತನಿಖೆಗಾಗಿ ಎರಡು ತಂಡಗಳನ್ನು ಅದು ರಚಿಸಿತ್ತು. ಮಧ್ಯಪ್ರದೇಶದ ಮತದಾರರ ಪಟ್ಟಿಗಳಲ್ಲಿ ಕನಿಷ್ಠ 60 ಲಕ್ಷ ನಕಲಿ ಮತದಾರರಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್,ತನ್ನ ಆರೋಪಕ್ಕೆ ಸಮರ್ಥನೆಯಾಗಿ ಸಾಕ್ಷ್ಯಾಧಾರಗಳನ್ನು ಸಲ್ಲಿಸಿತ್ತು.

ಮತದಾರರ ಪಟ್ಟಿಗಳಲ್ಲಿ ಅಸಮಜಂಸತೆಗಳಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಆಯೋಗದ ತಂಡಗಳು ನರೇಲಾ, ಭೋಜಪುರ, ಸಿಯೋನಿ-ಮಾಲ್ವಾ ಮತ್ತು ಹೋಶಂಗಾಬಾದ್ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದವು.

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯು ಈ ವರ್ಷದ ನವಂಬರ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News