ಕೇಂದ್ರ ಸಚಿವ ಅಠಾವಳೆ ಹೇಳಿಕೆಯಿಂದ ಬಿಜೆಪಿಯ ಠಕ್ಕುತನ ಬಯಲು: ಕಾಂಗ್ರೆಸ್

Update: 2018-06-09 13:55 GMT

ಹೊಸದಿಲ್ಲಿ,ಜೂ.9: ಭೀಮಾ-ಕೋರೆಗಾಂವ್ ದಂಗೆಗಳ ಕುರಿತು ನ್ಯಾಯಯುತವಾದ ತನಿಖೆಗಾಗಿ ಆಗ್ರಹಿಸಿರುವ ಕಾಂಗ್ರೆಸ್ ದಲಿತ ಹಕ್ಕುಗಳ ಹೋರಾಟಗಾರರನ್ನು ನಕ್ಸಲರೆಂದು ಹಣೆಪಟ್ಟಿ ಹಚ್ಚಿ ಬಂಧಿಸುವುದು ಸರಿಯಲ್ಲ ಎಂಬ ಎನ್‌ಡಿಎ ಪಾಲುದಾರ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ಹೇಳಿಕೆಯ ಹಿನ್ನಲೆಯಲ್ಲಿ ಬಿಜೆಪಿಯ ಇಬ್ಬಗೆಯ ಧೋರಣೆಯನ್ನು ತರಾಟೆಗೆತ್ತಿಕೊಂಡಿದೆ.

ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಪ್ರವೇಶವನ್ನು ಕೋರಿರುವ ಕಾಂಗ್ರೆಸ್,ಪುಣೆ ಪೊಲೀಸರ ತನಿಖೆ ಸರಿಯೋ ಅಥವಾ ಅಠಾವಳೆಯವರ ಹೇಳಿಕೆ ಸರಿಯೋ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಹೇಳಿದೆ. ದಲಿತರ ವಿರುದ್ಧ ಹಿಂಸೆಯನ್ನು ಪ್ರಚೋದಿಸುವಲ್ಲಿ ಹಿಂದುತ್ವ ನಾಯಕ ಸಂಭಾಜಿ ಭಿಡೆ ಅವರ ಪಾತ್ರದ ಕುರಿತು ತನಿಖೆಗೂ ಅಠಾವಳೆ ಆಗ್ರಹಿಸಿದ್ದರು.

ದಲಿತ ಕಾರ್ಯಕರ್ತರ ಬಂಧನವನ್ನು ಅನ್ಯಾಯ ಎಂದು ಅಠಾವಲೆ ಬಣ್ಣಿಸಿದ್ದಾರೆ ಮತ್ತು ಹಿಂಸಾಚಾರಕ್ಕೂ ಎಲ್ಗಾರ್ ಪರಿಷದ್‌ಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದು ಭೀಮಾ-ಕೋರೆಗಾಂವ್ ಕುರಿತು ಬಿಜೆಪಿಯ ಠಕ್ಕುತನ ಮತ್ತು ಇಬ್ಬಗೆ ಧೋರಣೆಯನ್ನು ಬಯಲಿಗೆಳೆದಿದೆ. ಬಂಧಿತರು ಮಾವೋವಾದಿಗಳು ಎಂದು ಮಹಾರಾಷ್ಟ್ರ ಸರಕಾರವು ಹೇಳುತ್ತಿದೆ. ಇಲ್ಲಿ ಸುಳ್ಳು ಹೇಳುತ್ತಿರುವರು ಯಾರು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಸರಣಿ ಟ್ವೀಟ್‌ಗಳಲ್ಲಿ ಪ್ರಶ್ನಿಸಿದ್ದಾರೆ.

ಆರೆಸ್ಸೆಸ್ ಒಡನಾಡಿ ಭಿಡೆಯವರ ಬಂಧನಕ್ಕೂ ಅಠಾವಳೆ ಆಗ್ರಹಿಸಿದ್ದಾರೆ. 2014ರಲ್ಲಿ ಭಿಡೆಯವರನ್ನು ಭೇಟಿಯಾಗಿದ್ದ ಮೋದಿ ಬಹಿರಂಗ ಸಭೆಯಲ್ಲಿ ಅವರನ್ನು ಹೊಗಳಿದ್ದರು. ಮಹಾರಾಷ್ಟ್ರ ಸರಕಾರವು ಭಿಡೆ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದಕ್ಕೆ ಇದು ಕಾರಣವಾಗಿರಬಹುದೇ ಎಂದು ಪ್ರಶ್ನಿಸಿರುವ ಸುರ್ಜೆವಾಲಾ,ರಾಜಕೀಯರಹಿತ ನ್ಯಾಯಯುತ ತನಿಖೆ ಈಗಿನ ಅಗತ್ಯವಾಗಿದೆ ಎಂದಿದ್ದಾರೆ.

ಅಠಾವಳೆ ಸುಳ್ಳು ಹೇಳುತ್ತಿದ್ದರೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಪುಣೆ ಪೊಲೀಸರ ತನಿಖೆ ಸರಿಯಾಗಿದ್ದರೆ ಅವರು ತಮ್ಮ ತನಿಖೆಯ ಆಧಾರವನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್‌ನ ಇನ್ನೋರ್ವ ವಕ್ತಾರ ಶಕ್ತಿಸಿಂಹ ಗೋಹಿಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News