ಬೋರ್ಡ್ ಪರೀಕ್ಷೆಯ ಟಾಪರ್ ಗೆ ಆದಿತ್ಯನಾಥ್ ನೀಡಿದ ಚೆಕ್ ಬೌನ್ಸ್!

Update: 2018-06-09 14:11 GMT

ಲಕ್ನೋ, ಜೂ.9: ಉತ್ತರ ಪ್ರದೇಶ ಬೋರ್ಡ್ 10ನೆ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ ವಿದ್ಯಾರ್ಥಿಗೆ ಮುಖ್ಯಮಂತ್ರಿ ಆದಿತ್ಯನಾಥ್ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ವಿದ್ಯಾರ್ಥಿಯೊಬ್ಬ ಇದಕ್ಕಾಗಿ ದಂಡ ಪಾವತಿಸಿದ ಬಗ್ಗೆ ವರದಿಯಾಗಿದೆ.

ಬಾರಾಬಂಕಿ ಜಿಲ್ಲೆಯಲ್ಲಿರುವ ಯಂಗ್ ಸ್ಟ್ರೀಮ್ ಇಂಟರ್ ಕಾಲೇಜ್ ನ ವಿದ್ಯಾರ್ಥಿ ಅಲೋಕ್ ಮಿಶ್ರಾ ಉತ್ತರ ಪ್ರದೇಶ ಬೋರ್ಡ್ ಪ್ರೌಢಶಾಲಾ ಪರೀಕ್ಷೆಯಲ್ಲಿ 93.5 ಶೇ. ಅಂಕಗಳನ್ನು ಗಳಿಸಿ ಉತ್ತೀರ್ಣನಾಗಿದ್ದ ಹಾಗು ರಾಜ್ಯದಲ್ಲಿ 7ನೆ ರ್ಯಾಂಕ್ ಗಳಿಸಿದ್ದ. ಈ ಹಿನ್ನೆಲೆಯಲ್ಲಿ ಮೇ 29ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಆದಿತ್ಯನಾಥ್ 1 ಲಕ್ಷ ರೂ.ಗಳ ಚೆಕ್ ವಿತರಿಸಿದ್ದರು.

ಬಾರಾಬಂಕಿಯ ಶಾಲೆಗಳ ಜಿಲ್ಲಾ ಇನ್ ಸ್ಪೆಕ್ಟರ್ ರಾಜ್ ಕುಮಾರ್ ಯಾದವ್ ರ ಹೆಸರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಲಾಗಿತ್ತು. ಚೆಕ್ ಪಡೆದ ಅಲೋಕ್ ಪೋಷಕರು ದೇನಾ ಬ್ಯಾಂಕ್ ನಲ್ಲಿರುವ ಅಲೋಕ್ ಖಾತೆಗೆ ಹಣ ವರ್ಗಾವಣೆಯಾಗಲು ಚೆಕ್ ಸಲ್ಲಿಸಿದ್ದರು. ಆದರೆ ಅಲೋಕ್ ಖಾತೆಗೆ ಹಣ ಬರದೇ ಇದ್ದಾಗ ಪೋಷಕರು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಚೆಕ್ ಬೌನ್ಸ್ ಆಗಿರುವ ವಿಚಾರ ಆಗಷ್ಟೇ ಬೆಳಕಿಗೆ ಬಂದಿತ್ತು.

“ಮುಖ್ಯಮಂತ್ರಿಯಿಂದ ಚೆಕ್ ಪಡೆದಾಗ ನನಗೆ ಸಾಕಷ್ಟು ಸಂತೋಷವಾಗಿತ್ತು. ಆದರೆ ಬ್ಯಾಂಕ್ ಗೆ ಸಲ್ಲಿಸಿ ಎರಡೇ ದಿನಗಳಲ್ಲಿ ಚೆಕ್ ಬೌನ್ಸ್ ಆಗಿರುವ ವಿಚಾರ ನಮಗೆ ತಿಳಿಯಿತು” ಎಂದು ಅಲೋಕ್ ಹೇಳಿದರು.

ಸಹಿಯಲ್ಲಿರುವ ವ್ಯತ್ಯಾಸದಿಂದಾಗಿ ಚೆಕ್ ಬೌನ್ಸ್ ಆಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ ಕುಮಾರ್ ಯಾದವ್, “ಸಹಿಯಲ್ಲಿರುವ ವ್ಯತ್ಯಾಸದಿಂದಾಗಿ ಚೆಕ್ ಬೌನ್ಸ್ ಆಗಿದೆ ಎಂದು ತಿಳಿಸಲಾಗಿದೆ. ಇದೇ ರೀತಿಯ ಸಮಸ್ಯೆ ಬೇರೆ ವಿದ್ಯಾರ್ಥಿಗಳಿಗೆ ಎದುರಾಗಿಲ್ಲ. ವಿದ್ಯಾರ್ಥಿಗೆ ಬೇರೆಯದೇ ಚೆಕ್ ನೀಡಲಾಗಿದೆ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News