ಉತ್ತರ ಪ್ರದೇಶದಲ್ಲಿ ಧೂಳು ಬಿರುಗಾಳಿ,ಸಿಡಿಲಿಗೆ 26 ಜನರು ಬಲಿ: ಮುಂಬೈನಲ್ಲಿ ಮಹಾ ಮಳೆ
ಹೊಸದಿಲ್ಲಿ,ಜೂ.9: ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ ಶುಕ್ರವಾರ ಧೂಳುಮಿಶ್ರಿತ ಬಿರುಗಾಳಿ ಮತ್ತು ಸಿಡಿಲಿನ ಅಬ್ಬರಕ್ಕೆ 26 ಜನರು ಸಾವನ್ನಪ್ಪಿದ್ದರೆ,ಶನಿವಾರ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿ ಅವಘಡಗಳಿಗೆ ಇಬ್ಬರು ಬಲಿಯಾಗಿದ್ದಾರೆ.
ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರೈಲು ಮತ್ತು ವಾಯು ಸಂಚಾರ ವ್ಯತ್ಯಯಗೊಂಡಿದ್ದರೆ,ದಿಲ್ಲಿ ಧೂಳುಮಿಶ್ರಿತ ಬಿರುಗಾಳಿಗೆ ಸಾಕ್ಷಿಯಾಗಿತ್ತು. ದಿಲ್ಲಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳು ಕಳೆದ ಕೆಲವು ದಿನಗಳಿಂದ ತೀವ್ರ ತಾಪಮಾನವನ್ನು ಅನುಭವಿಸುತ್ತಿವೆ.
ಪಂಜಾಬ್,ಹರ್ಯಾಣಗಳಲ್ಲಿ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆಯಾಗಿರುವುದು ವರದಿಯಾಗಿದೆ.
ಉತ್ತರ ಪ್ರದೇಶದ 11 ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಧೂಳುಮಿಶ್ರಿತ ಬಿರುಗಾಳಿ ಮತ್ತು ಸಿಡಿಲಿನಿಂದಾಗಿ 21 ಜನರು ಸಾವನ್ನಪ್ಪಿದ್ದಾರೆ. ಜಾನಪುರ ಮತ್ತು ಸುಲ್ತಾನಪುರಗಳಲ್ಲಿ ತಲಾ ಐವರು,ಉನ್ನಾವೊದಲ್ಲಿ ನಾಲ್ವರು,ಚಂದೌಲಿ ಮತ್ತು ಬಹರೈಚ್‌ಗಳಲ್ಲಿ ತಲಾ ಮೂವರು,ರಾಯಬರೇಲಿಯಲ್ಲಿ ಇಬ್ಬರು ಹಾಗೂ ಮಿರ್ಝಾಪುರ,ಸೀತಾಪುರ,ಅಮೇಥಿ ಮತ್ತು ಪ್ರತಾಪಗಡಗಳಲ್ಲಿ ತಲಾ ಓರ್ವರು ಮೃತಪಟ್ಟಿದ್ದಾರೆ. ಕನೌಜ್ ಜಿಲ್ಲೆಯಲ್ಲಿ ಧೂಳುಮಿಶ್ರಿತ ಬಿರುಗಾಳಿಯಿತ್ತಾದರೂ ಯಾವುದೇ ಸಾವು ವರದಿಯಾಗಿಲ್ಲ ಎಂದು ಸರಕಾರಿ ವಕ್ತಾರರು ಶನಿವಾರ ತಿಳಿಸಿದರು.
ತನ್ಮಧ್ಯೆ ಮೃತರ ಕುಟುಂಬಗಳಿಗೆ ತಕ್ಷಣವೇ ಪರಿಹಾರವನ್ನು ಒದಗಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ ಅವರು ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಿಡಿಲು ಬಡಿದು ಮೀನುಗಾರನೋರ್ವ ಮೃತಪಟ್ಟಿದ್ದರೆ,ಇತರ ಆರು ಜನರು ಗಾಯಗೊಂಡಿದ್ದಾರೆ.
ಭಾರೀ ಮಳೆ ಸುರಿಯುತ್ತಿದ್ದ ಜಿಬಿ ರೋಡ್‌ನಲ್ಲಿ ದ್ವಿಚಕ್ರ ವಾಹನವೊಂದು ಲಾರಿಗೆ ಗುದ್ದಿದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆಯೋರ್ವಳು ಸಾವನ್ನಪ್ಪಿದ್ದಾಳೆ.
ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ಲೋಕಲ್ ರೈಲುಗಳು ವಿಳಂಬವಾಗಿ ಸಂಚರಿಸುತ್ತಿದ್ದವು.
ದಿಲ್ಲಿಯಲ್ಲಿ ಶನಿವಾರ ಸಂಜೆ ಗಂಟೆಗೆ 70 ಕಿ.ಮೀ.ವೇಗದ ಗಾಳಿಯೊಂದಿಗೆ ಧೂಳು ಮಿಶ್ರಿತ ಬಿರುಗಾಳಿ ಅಪ್ಪಳಿಸಿದ್ದು,ತೀವ್ರ ತಾಪಮಾನದಿಂದಾಗಿ ಕಂಗೆಟ್ಟಿರುವ ಜನರಿಗೆ ಕೊಂಚ ನೆಮ್ಮದಿಯನ್ನು ನೀಡಿದೆ.