ಚೊಚ್ಚಲ ಗ್ರ್ಯಾನ್‌ಸ್ಲಾಮ್ ಗೆಲುವಿಗೆ ಮ್ಯಾನೇಜರ್ ಸ್ಫೂರ್ತಿ

Update: 2018-06-10 18:33 GMT

ಪ್ಯಾರಿಸ್, ಜೂ.10: ರೊಲ್ಯಾಂಡ್ ಗ್ಯಾರೊಸ್‌ನಲ್ಲಿ 40 ವರ್ಷಗಳ ಹಿಂದೆ ತನ್ನ ಮ್ಯಾನೇಜರ್ ವರ್ಜಿನಿಯ ರುಝಿಸಿ ಮಾಡಿರುವ ಸಾಧನೆಯೇ ತಾನು ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಲು ಸ್ಫೂರ್ತಿಯಾಗಿದೆ ಎಂದು ಫ್ರೆಂಚ್ ಓಪನ್‌ನ ನೂತನ ಮಹಿಳಾ ಚಾಂಪಿಯನ್ ಸಿಮೊನಾ ಹಾಲೆಪ್ ಹೇಳಿದ್ದಾರೆ. ಹಾಲೆಪ್‌ಗೆ ಈಗ ಮ್ಯಾನೇಜರ್ ಆಗಿರುವ ರುಝಿಸಿ 1978ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಮಿಮಾ ಜಸೌಸೊವಿಕ್‌ರನ್ನು ಮಣಿಸಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಆ ಬಳಿಕ ರೊಮೇನಿಯಾದ ಯಾವ ಆಟಗಾರ್ತಿ ಅಥವಾ ಆಟಗಾರ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿಲ್ಲ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಅಮೆರಿಕದ ಸ್ಲೋಯಾನೆ ಸ್ಟೀಫನ್ಸ್‌ರನ್ನು 3-6, 6-4, 6-1 ಸೆಟ್‌ಗಳಿಂದ ಮಣಿಸಿದ ಹಾಲೆಪ್ ದೀರ್ಘಕಾಲದ ಕಾಯುವಿಕೆಗೆ ಅಂತ್ಯ ಹಾಡಿದರು. ತನ್ನ ನಾಲ್ಕನೇ ಪ್ರಯತ್ನದಲ್ಲಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಹಾಲೆಪ್ ಅಮೆರಿಕದ ಏಳು ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ಕ್ರಿಸ್ ಎವರ್ಟ್ ದಾಖಲೆಯನ್ನು ಸರಿಗಟ್ಟಿದರು. ಎವರ್ಟ್ 1974ರಲ್ಲಿ ಫ್ರೆಂಚ್ ಓಪನ್ ಜಯಿಸುವ ಮೊದಲು ಮೂರು ಬಾರಿ ಗ್ರಾನ್‌ಸ್ಲಾಮ್ ಫೈನಲ್‌ನಲ್ಲಿ ಎಡವಿದ್ದರು.

  ‘‘ನನ್ನ ಗೆಲುವಿಗೆ ಮ್ಯಾನೇಜರ್ ಸ್ಫೂರ್ತಿ. ನನ್ನ ಮ್ಯಾನೇಜರ್ 40 ವರ್ಷಗಳ ಹಿಂದೆ ಪ್ಯಾರಿಸ್‌ನಲ್ಲಿ ಟ್ರೋಫಿ ಜಯಿಸಿದ್ದರು. ಇದೊಂದು ವಿಶೇಷ ಕ್ಷಣ. ಫ್ರೆಂಚ್ ಓಪನ್‌ನಲ್ಲಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವುದು ಒಂದು ವಿಶೇಷ’’ ಎಂದು ಮ್ಯಾನೇಜರ್ ರುಝಿಸಿಯವರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹಾಲೆಪ್ ಅಭಿಪ್ರಾಯಪಟ್ಟರು.

 ಹಾಲೆಪ್ ಶನಿವಾರ ಪ್ಯಾರಿಸ್ ಓಪನ್ ಚಾಂಪಿಯನ್ ಆಗುವ ಮೊದಲು ಮೂರು ಬಾರಿ ಗ್ರಾನ್‌ಸ್ಲಾಮ್ ಫೈನಲ್‌ನಲ್ಲಿ ಸೋತಿದ್ದರು. ಪ್ಯಾರಿಸ್‌ನಲ್ಲಿ 2 ಬಾರಿ ಟ್ರೋಫಿ ವಂಚಿತರಾಗಿದ್ದರು. 2014ರಲ್ಲಿ ಮರಿಯಾ ಶರಪೋವಾಗೆ ಸೋತಿದ್ದ ಹಾಲೆಪ್ 2017ರಲ್ಲಿ ಜೆಲೆನಾ ಒಸ್ಟಾಪೆಂಕೊ ವಿರುದ್ಧ ಸೋತಿದ್ದರು. ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರೂ ಕರೊಲಿನ್ ವೋಝ್ನಿಯಾಕಿಗೆ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News