ಭಾರತದಲ್ಲಿ ಫುಟ್ಬಾಲ್ ಸಂಸ್ಕೃತಿಯ ಕೊರತೆಯಿದೆ: ಭುಟಿಯಾ

Update: 2018-06-10 18:26 GMT

ಹೊಸದಿಲ್ಲಿ, ಜೂ.10: ‘‘ಫಿಫಾ ವಿಶ್ವಕಪ್‌ನಲ್ಲಿ ಆಡುವುದು ಭಾರತದ ಪಾಲಿಗೆ ಒಂದು ಕನಸಾಗಿ ಉಳಿದಿದೆ. ನಮ್ಮ ದೇಶದಲ್ಲಿ ಫುಟ್ಬಾಲ್ ಸಂಸ್ಕೃತಿಯ ಕೊರತೆಯಿದೆ. ಇಂತಹ ವಾತಾವರಣ ಶೀಘ್ರವೇ ಬದಲಾವಣೆಯಾಗುವ ಸಾಧ್ಯತೆಯೂ ಇಲ್ಲ್ಲ’’ ಎಂದು ಫುಟ್ಬಾಲ್ ದಿಗ್ಗಜರಾದ ಭೈಚುಂಗ್ ಭುಟಿಯಾ ಹಾಗೂ ಐ.ಎಂ.ವಿಜಯನ್ ಅಭಿಪ್ರಾಯಪಟ್ಟಿದ್ದಾರೆ.

‘‘ದೇಶದಲ್ಲಿ ಫುಟ್ಬಾಲ್ ಬೆಳವಣಿಗೆಯತ್ತ ಕಾರ್ಯೋನ್ಮುಖವಾಗುವ ಅಗತ್ಯವಿದೆ. ಇಲ್ಲವಾದರೆ ಕ್ರಿಕೆಟ್ ಎಲ್ಲವನ್ನೂ ಆಹುತಿ ತೆಗೆದುಕೊಳ್ಳಲಿದೆ. ಇತ್ತೀಚೆಗಿನ ದಿನಗಳಲ್ಲಿ ಭಾರತದ ಫುಟ್ಬಾಲ್ ತಂಡ ಉತ್ತಮವಾಗಿ ಆಡುತ್ತಿದೆ. ಆದರೆ, ವಿಶ್ವಕಪ್ ಬಗ್ಗೆ ಮಾತನಾಡುವಾಗ ಅದೊಂದು ವಿಭಿನ್ನ ವಿಷಯವಾಗುತ್ತದೆ. ದೇಶದಲ್ಲಿ ಫುಟ್ಬಾಲ್ ಸಂಸ್ಕೃತಿ ಸೃಷ್ಟಿಸುವುದು ದೊಡ್ಡ ಸವಾಲಾಗಿದೆ’’ ಎಂದು 41ರ ಹರೆಯದ ಭುಟಿಯಾ ಹೇಳಿದ್ದಾರೆ. ‘‘ನಮ್ಮಲ್ಲಿ ಪ್ರತಿಭೆಗಳ ಕೊರತೆಯಿಲ್ಲ. ಮೂಲಭೂತ ಸೌಕರ್ಯ ಈಗ ಹಿಂದಿಗಿಂತ ಚೆನ್ನಾಗಿದೆ. ಯುವ ಕಲ್ಯಾಣ ಯೋಜನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಫುಟ್ಬಾಲ್ ಸಂಸ್ಕೃತಿ ಮಾಯವಾಗಿದೆ’’ಎಂದು ಭಾರತದ ಮಾಜಿ ಶ್ರೇಷ್ಠ ಸ್ಟ್ರೈಕರ್ ಭುಟಿಯಾ ಹೇಳಿದ್ದಾರೆ. ‘‘ನಮ್ಮ ಫುಟ್ಬಾಲ್ ಕ್ಲಬ್‌ಗಳು ಹಾಗೂ ಸಂಸ್ಥೆಗಳು ವಿದೇಶದ ಅಗ್ರ ಫುಟ್ಬಾಲ್ ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಬೇಕು. ಕಾಟಾಚಾರದ ಒಪ್ಪಂದವಾಗದೇ ಅದರಲ್ಲಿ ಗಂಭೀರತೆ ಇರಬೇಕು. ನಮ್ಮ ದೇಶದ ಫುಟ್ಬಾಲ್ ಪ್ರತಿಭೆಗಳಿಗೆ ಬಾರ್ಸಿಲೋನದ ಅಕಾಡಮಿ ತರಬೇತಿ ನೀಡುತ್ತಿದೆ. ಭಾರತದಲ್ಲಿ ಫುಟ್ಬಾಲ್ ಪ್ರತಿಭೆಗೆ ಕೊರತೆಯಿಲ್ಲ. ಈಗ ನಾವು ವಿಶ್ವಕಪ್‌ಗೆ ಅರ್ಹತೆ ಬಗ್ಗೆ ಮಾತನಾಡುತ್ತೇವೆ. ಈ ಸಂದರ್ಭದಲ್ಲಿ ಅದು ಅತ್ಯಂತ ಕಷ್ಟದ ಕೆಲಸ. ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಆಡಲು ನಾವು ಇನ್ನಷ್ಟು ವರ್ಷ ಕಾಯಬೇಕಾಗಿದೆ’’ಎಂದು ಐಎಂ ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News