251 ರೂ.ಗೆ ‘ಫ್ರೀಡಂ’ ಸ್ಮಾರ್ಟ್ ಫೋನ್ ಘೋಷಿಸಿದ್ದ ಮೋಹಿತ್ ಗೋಯಲ್ ಬಂಧನ
ಹೊಸದಿಲ್ಲಿ, ಜೂ.11: ಜಗತ್ತಿನ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್ ‘ಫ್ರೀಡಂ 251’ ಘೋಷಿಸಿ ಸುದ್ದಿಯಾಗಿದ್ದ ರಿಂಗಿಂಗ್ ಬೆಲ್ಸ್ ಸ್ಥಾಪಕ ಮೋಹಿತ್ ಗೋಯೆಲ್ ಹಾಗು ಇತರ ಇಬ್ಬರನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಉದ್ಯಮಿಯೊಬ್ಬರಿಂದ ಸುಲಿಗೆಗೆ ಯತ್ನಿಸಲಾಗಿತ್ತು ಎಂದು ಆರೋಪಿಸಲಾಗಿದೆ. ರಿಂಗಿಂಗ್ ಬೆಲ್ಸ್ ಸ್ಥಾಪಕ ಗೋಯೆಲ್ ಘೋಷಿಸಿದ್ದ 251 ರೂ.ಗೆ ಸ್ಮಾರ್ಟ್ ಫೋನ್ ಈ ಹಿಂದೆ ಭಾರೀ ಸುದ್ದಿಯಾಗಿತ್ತು,
ರಾಜಸ್ಥಾನದ ಆಲ್ವಾರ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗೋಯೆಲ್, ಆತನ ಸಹವರ್ತಿ ಹಾಗು ಮಹಿಳೆಯೊಬ್ಬರು ಉದ್ಯಮಿಯಿಂದ ಹಣ ಸುಲಿಗೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಮಾರ್ಚ್ 6ರಂದು ಮಹಿಳೆಯೊಬ್ಬರು ತನ್ನನ್ನು ಐವರು ಉದ್ಯಮಿಗಳು ಅತ್ಯಾಚಾರಗೈದಿರುವುದಾಗಿ ಆಲ್ವಾರ್ ಪೊಲೀಸರಿಗೆ ದೂರು ನೀಡಿದ್ದರು. ಐವರು ಉದ್ಯಮಿಗಳನ್ನೂ ಪೊಲೀಸರು ಬಂಧಿಸಿದ್ದು, ಅವರನ್ನು ಹಣಕ್ಕಾಗಿ ಬೆದರಿಸಿದ್ದು ವಿಚಾರಣೆ ವೇಳೆ ತಿಳಿದುಬಂದಿತ್ತು. ಪ್ರಕರಣ ಇತ್ಯರ್ಥಕ್ಕಾಗಿ ಉದ್ಯಮಿಗಳಿಂದ 5 ಕೋಟಿ ರೂ.ಬೇಡಿಕೆಯಿರಿಸಲಾಗಿತ್ತು ಎನ್ನಲಾಗಿದೆ.