×
Ad

ಮಂಗಳವಾರ ಐತಿಹಾಸಿಕ ಟ್ರಂಪ್-ಕಿಮ್ ಶೃಂಗ ಸಮ್ಮೇಳನ

Update: 2018-06-11 21:04 IST

ಸಿಂಗಾಪುರ, ಜೂ. 11: ಮಂಗಳವಾರ ನಡೆಯಲು ನಿಗದಿಯಾಗಿರುವ ಐತಿಹಾಸಿಕ ಶೃಂಗ ಸಮ್ಮೇಳನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಸೋಮವಾರ ಭರದ ಸಿದ್ಧತೆಗಳನ್ನು ನಡೆಸಿದ್ದಾರೆ.

ಅವರು ಸಿಂಗಾಪುರದಲ್ಲಿ ತಾವು ತಂಗಿರುವ ಭವ್ಯ ಹೊಟೇಲ್‌ಗಳಲ್ಲಿ ತಮ್ಮ ಸಲಹಾಕಾರರೊಂದಿಗೆ ಮಾತುಕತೆಗಳನ್ನು ನಡೆಸಿದರು. ಅವರ ಹೊಟೇಲ್‌ಗಳು ಪರಸ್ಪರ ಅರ್ಧ ಮೈಲಿಗೂ ಕಡಿಮೆ ಅಂತರದಲ್ಲಿವೆ.

ಮಂಗಳವಾರದ ಪರಮಾಣು ಶೃಂಗ ಸಮ್ಮೇಳನವು ಕೋಟ್ಯಂತರ ಜನರ ಭವಿಷ್ಯವನ್ನು ನಿರ್ಧರಿಸಲಿದೆ ಹಾಗೂ ಈ ಸ್ವತಃ ಇಬ್ಬರು ನಾಯಕರ ರಾಜಕೀಯ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಕೊರಿಯ ಪರ್ಯಾಯ ದ್ವೀಪವನ್ನು ಅಣ್ವಸ್ತ್ರ ಮುಕ್ತಗೊಳಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.

ಟ್ರಂಪ್ ಮತ್ತು ಕಿಮ್ ಮಂಗಳವಾರ ಸಿಂಗಾಪುರ ಸಮಯ ಬೆಳಗ್ಗೆ 9 ಗಂಟೆಗೆ ಕೈಕುಲುಕುವ ಮೂಲಕ ಶೃಂಗ ಸಮ್ಮೇಳನ ಆರಂಭಗೊಳ್ಳಲಿದೆ.

ಬಳಿಕ ಇಬ್ಬರೇ ನಾಯಕರು ಎರಡು ಗಂಟೆಗಳ ಕಾಲ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆ ಭಾಷಾಂತರಕಾರರು ಮಾತ್ರ ಇರುತ್ತಾರೆ. ಬಳಿಕ ಮಾತುಕತೆಯಲ್ಲಿ ಅವರವರ ಸಲಹಾಕಾರರು ಸೇರಿಕೊಳ್ಳುತ್ತಾರೆ.

ಮಂಗಳವಾರದ ಶೃಂಗ ಸಮ್ಮೇಳನವು ಉತ್ತರ ಕೊರಿಯ ನಾಯಕ ಮತ್ತು ಹಾಲಿ ಅಮೆರಿಕ ಅಧ್ಯಕ್ಷರ ನಡುವೆ ನಡೆಯುವ ಪ್ರಥಮ ಮಾತುಕತೆಯಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News