ವಿಶ್ವಕಪ್‌ನಲ್ಲಿ ಅರ್ಜೆಂಟೀನದ ಪ್ರ ದರ್ಶನದಿಂದ ಭವಿಷ್ಯ ನಿರ್ಧಾರ

Update: 2018-06-11 18:11 GMT

ಮಾಸ್ಕೊ, ಜೂ.11: ರಶ್ಯದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಅರ್ಜೆಂಟೀನ ಪ್ರದರ್ಶನ ನನ್ನ ಅಂತರ್‌ರಾಷ್ಟ್ರೀಯ ಫುಟ್ಬಾಲ್ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಅರ್ಜೆಂಟೀನ ಫುಟ್ಬಾಲ್ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಹೇಳಿದ್ದಾರೆ.

‘‘ನಾವು ಇದೀಗ ಸತತ ಮೂರು ಫೈನಲ್ ಪಂದ್ಯವನ್ನು ಸೋತಿದ್ದೇವೆ. ಇಂತಹ ಪರಿಸ್ಥಿತಿ ನಮ್ಮನ್ನು ಕಷ್ಟದ ಕ್ಷಣಕ್ಕೆ ಕೊಂಡೊಯ್ಯುತ್ತಿದೆ’’ ಎಂದು ಬಾರ್ಸಿಲೋನದ ಫಾರ್ವರ್ಡ್ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.

ಮೆಸ್ಸಿ ನೇತೃತ್ವದಲ್ಲಿ 2014ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನ ತಂಡ ಜರ್ಮನಿ ವಿರುದ್ಧ 1-0 ಗೋಲುಗಳ ಅಂತರದಿಂದ ಸೋತಿತ್ತು. ಆ ಬಳಿಕ 2015 ಹಾಗೂ 2016ರಲ್ಲಿ ನಡೆದ ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಚಿಲಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸತತ ಎರಡು ಬಾರಿ ಸೋತಿತ್ತು. ವಿಶ್ವಕಪ್‌ನ ವೇಳೆ 31ನೇ ವಯಸ್ಸಿಗೆ ಕಾಲಿಡಲಿರುವ ಮೆಸ್ಸಿ, ಸ್ಪೇನ್, ಬ್ರೆಝಿಲ್, ಜರ್ಮನಿ, ಫ್ರಾನ್ಸ್ ಹಾಗೂ ಬೆಲ್ಜಿಯಂ ಈ ವರ್ಷದ ವಿಶ್ವಕಪ್‌ನ್ನು ಜಯಿಸಬಲ್ಲ ನೆಚ್ಚಿನ ತಂಡಗಳಾಗಿವೆ ಎಂದರು.

‘‘ಎಲ್ಲ ತಂಡಗಳು ಟೀಮ್ ಗೇಮ್ ಹಾಗೂ ವೈಯಕ್ತಿಕ ಪ್ರತಿಭೆಗಳ ಜೊತೆ ಭಾರೀ ಆತ್ಮವಿಶ್ವಾಸದೊಂದಿಗೆ ರಶ್ಯಕ್ಕೆ ಆಗಮಿಸುತ್ತಿವೆ’’ ಎಂದು ಐದು ಬಾರಿ ವರ್ಷದ ವಿಶ್ವದ ಆಟಗಾರ ಪ್ರಶಸ್ತಿ ಜಯಿಸಿರುವ ಮೆಸ್ಸಿ ಹೇಳಿದ್ದಾರೆ.

ಅರ್ಜೆಂಟೀನ ತಂಡ ಶನಿವಾರ ಮಾಸ್ಕೋದಲ್ಲಿ ಐಸ್‌ಲ್ಯಾಂಡ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಆ ಬಳಿಕ ಡಿ ಗುಂಪಿನಲ್ಲಿ ಕ್ರೊಯೇಷಿಯ ಹಾಗೂ ನೈಜೀರಿಯ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News