ಕಿಮ್ ಜಾಂಗ್ ಉನ್ ಭೇಟಿಯ ನಂತರ ಯುಎಸ್-ದಕ್ಷಿಣ ಕೊರಿಯ ಸಮರಾಭ್ಯಾಸ ಸ್ಥಗಿತಗೊಳಿಸಿದ ಟ್ರಂಪ್
ಸಿಂಗಾಪುರ, ಜೂ.12: ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಮಧ್ಯೆ ನಡೆದ ಐತಿಹಾಸಿಕ ಪರಮಾಣು ಸಭೆಯಲ್ಲಿ ಟ್ರಂಪ್ ಕೊರಿಯಾವನ್ನು ಸಂಪೂರ್ಣ ಪರಮಾಣುನಿಶಸ್ತ್ರೀಕರಣಗೊಳಿಸುವ ಬದ್ಧತೆಯನ್ನು ಪುನರುಚ್ಛರಿಸಿದ್ದಾರೆ ಹಾಗೂ ಉತ್ತರ ಕೊರಿಯಾಕ್ಕೆ ಭದ್ರತೆಯ ಭರವಸೆಯನ್ನು ನೀಡಿದ್ದಾರೆ.
ತಿಂಗಳ ಹಿಂದೆ ಅಸಾಧ್ಯ ಎಂದು ಭಾವಿಸಲಾಗಿದ್ದ ಟ್ರಂಪ್ ಮತ್ತು ಕಿಮ್ ಜಾಂಗ್ ನಡುವಿನ ಮಾತುಕತೆಯು ಮಂಗಳವಾರದಂದು ಸಿಂಗಾಪುರ ದ್ವೀಪದಲ್ಲಿ ನಡೆಯಿತು. ಇಬ್ಬರೂ ಗಣ್ಯರು ಪರಸ್ಪರ ಹಸ್ತಲಾಘವ ಮಾಡಿ ಹಲವು ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡ ನಂತರ ಭೋಜನಕೂಟದಲ್ಲೂ ಭಾಗವಹಿಸಿದರು. ಐದು ಗಂಟೆಗಳ ಕಾಲ ನಡೆದ ಮಾತುಕತೆಯ ನಂತರ ಟ್ರಂಪ್, ತಮ್ಮ ದೇಶದ ಜನರಿಗಾಗಿ ಮೊದಲ ದಿಟ್ಟ ಹೆಜ್ಜೆಯನ್ನಿಟ್ಟ ಕಿಮ್ ಜಾಂಗ್‌ರಿಗೆ ಧನ್ಯವಾದ ಸೂಚಿಸಿದರು.
ಇದಕ್ಕೂ ಮೊದಲ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಟ್ರಂಪ್, ತಮ್ಮ ಪರಮಾಣು ಕಾರ್ಯಕ್ರಮಗಳನ್ನು ಕೈಬಿಡುವ ಮೂಲಕ ತಮ್ಮ ದೇಶವನ್ನು ಇತರ ರಾಷ್ಟ್ರಗಳ ಸಮುದಾಯದ ಜೊತೆಗೆ ಸೇರಿಸುವ ಅಪೂರ್ವ ಅವಕಾಶ ಕಿಮ್ ಜಾಂಗ್ ಮೇಲಿದೆ ಎಂದು ತಿಳಿಸಿದ್ದಾರೆ. ಪರಮಾಣುನಿಶಸ್ತ್ರೀಕರಣದ ಅವಧಿಯು ಬಹಳ ದೀರ್ಘವಾಗಿದ್ದರೂ ಒಂದೊಮ್ಮೆ ಅದು ಆರಂಭವಾದರೆ ಸಂಪೂರ್ಣಗೊಂಡಂತೆಯೇ ಎಂದು ಟ್ರಂಪ್ ತಿಳಿಸಿದ್ದಾರೆ. ದಶಕಗಳಿಂದಲೂ ತನ್ನ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಉತ್ತರ ಕೊರಿಯದ ನಾಯಕನ ಪ್ರಶಂಸೆ ಮಾಡಲು ಹಿಂದೇಟು ಹಾಕಿದ ಟ್ರಂಪ್, ಉತ್ತರ ಕೊರಿಯದಲ್ಲಿ ಬಂಧನಕ್ಕೊಳಗಾಗಿ ಸಾವನ್ನಪ್ಪಿದ ಅಮೆರಿಕನ್ ಪ್ರಜೆ ಒಟ್ಟೊ ವಂರ್ಬಿಯರ್ ಸಾವು ವ್ಯರ್ಥವಗಾಲಿಲ್ಲ. ಅವರ ಸಾವಿನ ಕಾರಣದಿಂದಲೇ ಇಂದು ಪರಮಾಣುನಿಶಸ್ತ್ರೀಕರಣದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಎರಡು ದೇಶಗಳ ನಾಯಕರು ಸಹಿ ಮಾಡಿರುವ ಒಪ್ಪಂದದಲ್ಲಿ ಈ ಹಿಂದೆ ನೀಡಲಾದ ಸಾರ್ವಜನಿಕ ಹೇಳಿಕೆಗಳು ಮತ್ತು ಹಿಂದಿನ ಭರವಸೆಗಳಿಗೆ ಬದ್ಧವಾಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ಒಪ್ಪಂದದ ಪ್ರಕಾರ ಕೊರಿಯ ಪರ್ಯಾಯದ್ವೀಪದಲ್ಲಿ ಸ್ಥಿರ ಮತ್ತು ನಿರಂತರ ಶಾಂತಿಯನ್ನು ಕಾಪಾಡುವ ಕುರಿತು ಎರಡೂ ದೇಶಗಳು ಭರವಸೆಯನ್ನು ನೀಡಿವೆ. ಜೊತೆಗೆ ಕೊರಿಯನ್ ಯುದ್ಧದ ಸಮಯದಲ್ಲಿ ನಾಪತ್ತೆಯಾಗಿರುವ ಮತ್ತು ಬಂಧಿಯಾಗಿರುವ ವ್ಯಕ್ತಿಗಳನ್ನು ತಾಯ್ನಾಡಿಗೆ ಮರಳಿಸುವ ಬಗ್ಗೆಯೂ ಒಪ್ಪಂದ ಮಾಡಲಾಗಿದೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಟ್ರಂಪ್, ಕಿಮ್ ಜೊತೆ ಭವಿಷ್ಯದಲ್ಲಿ ಇನ್ನಷ್ಟು ಬಾರಿ ಭೇಟಿಯಾಗುವ ಇಂಗಿತವನ್ನು ವ್ಯಕ್ತಪಡಿಸಿದರು ಮತ್ತು ಉತ್ತರ ಕೊರಿಯ ನಾಯಕನನ್ನು ಶ್ವೇತಭವನಕ್ಕೆ ಆಹ್ವಾನಿಸುವುದಾಗಿಯೂ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಿಮ್, ಇದೊಂದು ಐತಿಹಾಸಿಕ ಭೇಟಿಯಾಗಿದ್ದು ಹಳೆಯದನ್ನು ಹಿಂದೆ ಬಿಟ್ಟು ಮುನ್ನಡೆಯುವುದಾಗಿ ತಿಳಿಸಿದರು. ಉತ್ತರ ಕೊರಿಯದಲ್ಲಿ ನಡೆಯಲು ಅಸಾಧ್ಯವಾದ ವಿದ್ಯಾಮಾನವೊಂದರಲ್ಲಿ ಪತ್ರಕರ್ತರು ಟ್ರಂಪ್ ಮತ್ತು ಕಿಮ್‌ಗೆ ಪ್ರಶ್ನೆಗಳ ಸುರಿಮಳೆಗರೆದರು. ಮುಖ್ಯವಾಗಿ, ಜೂನ್ 2017ರಲ್ಲಿ ಉತ್ತರ ಕೊರಿಯದಲ್ಲಿ ಕಸ್ಟಡಿಯಲ್ಲಿದ್ದ ವೇಳೆ ಮೆದುಳಿಗೆ ಹಾನಿಯಾಗಿ ಸಾವನ್ನಪ್ಪಿದ್ದ ಅಮೆರಿಕನ್ ವಿದ್ಯಾರ್ಥಿ ಒಟ್ಟೊ ವಂರ್ಬಿಯರ್ ಸಾವಿನ ಕುರಿತು ಏನಾದರೂ ಚರ್ಚೆ ನಡೆಸಲಾಗಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಅಮೆರಿಕ ಮತ್ತು ಉತ್ತರ ಕೊರಿಯ ಮಧ್ಯೆ ನಡೆದ ಮೊಟ್ಟಮೊದಲ ಮಾತುಕತೆಯ ಬಗ್ಗೆ ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿತ್ತು. ಈ ಕುರಿತು ಮಾತನಾಡಿದ ಕಿಮ್, “ಕೆಲವರಂತೂ ಇದು ಯಾವುದೋ ವೈಜ್ಞಾನಿಕ ಕಲ್ಪನೆಯ ಸಿನೆಮಾದ ದೃಶ್ಯವಾಗಿರಬಹುದೆಂದು ಭಾವಿಸಿರಬಹುದು” ಎಂದು ವ್ಯಂಗ್ಯವಾಡಿದ್ದಾರೆ.