ನಾಳೆ ಐಎಂಎ ಸಭಾಂಗಣದಲ್ಲಿ ಕಾರ್ಯಕ್ರಮ-ಐದು ಮಂದಿಗೆ ಸನ್ಮಾನ

Update: 2018-06-13 10:14 GMT



ಮಂಗಳೂರು, ಜೂ.13: ಭಾರತೀಯ ರೆಡ್‍ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ರಕ್ತನಿಧಿ ಘಟಕದ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಇಂದು(ಜೂ.14)ಪೂರ್ವಾಹ್ನ 10 ಗಂಟೆಗೆ ನಗರದ ವೆನ್ಲಾಕ್ ಆಸ್ಪತ್ರೆಯ ಬಳಿ ಇರುವ ಐಎಂಎ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ರೆಡ್‍ಕ್ರಾಸ್ ಘಟಕದ ಉಪಾಧ್ಯಕ್ಷ ಹಾಗೂ ರಕ್ತ ನಿಧಿ ಸಮಿತಿಯ ಅಧ್ಯಕ್ಷ ಡಾ.ಸುಶೀಲ್ ಜತ್ತನ್ನ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಐದು ಮಂದಿಯನ್ನು ಸನ್ಮಾನಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಡಿ.ವೇದವ್ಯಾಸ ಕಾಮತ್,ರೆಡ್‍ಕ್ರಾಸ್ ದ.ಕ.ಜಿಲ್ಲಾಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.  `ಬೇರೊಬ್ಬರಿಗಾಗಿ ರಕ್ತದಾನ ಮಾಡಿ ಜೀವನವನ್ನು ಹಂಚಿಕೊಳ್ಳಿ' ಎಂಬ ಘೋಷವಾಕ್ಯದಡಿ ಈ ಬಾರಿ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದವರು ತಿಳಿಸಿದರು.
ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿರುವ ದ.ಕ. ರೆಡ್‍ಕ್ರಾಸ್ ಸೊಸೈಟಿಯ ರಕ್ತನಿಧಿ ಘಟಕದಿಂದ ಲೇಡಿಗೋಷನ್ ಆಸ್ಪತ್ರೆಗೆ ಪ್ರತಿ ತಿಂಗಳು 250 ಯುನಿಟ್ ರಕ್ತವನ್ನು ಉಚಿತವಾಗಿ ನೀಡಲಾಗುತ್ತಿದೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಬದುಕಿಗೆ ಆಸರೆಯಾಗಬೇಕು. ರೆಡ್‍ಕ್ರಾಸ್ ಪ್ರತಿ ತಿಂಗಳು ಸುಮಾರು12 ರಷ್ಟು ರಕ್ತದಾನ ಶಿಬಿರಗಳನ್ನು ಆಯೋಜಿಸಾತ್ತಾ ಬಂದಿದೆ. ಯೂತ್ ರೆಡ್‍ಕ್ರಾಸ್ ಮೂಲಕ ಕಾಲೇಜು ವಿದ್ಯಾರ್ಥಿಗಳಲ್ಲಿ ರಕ್ತದಾನದ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ ಎಂದು ಸುಶೀಲ್ ಜತ್ತನ್ನ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರೆಡ್‍ಕ್ರಾಸ್ ರಕ್ತ ನಿಧಿ ಘಟಕದ ಎಡ್ವರ್ಡ್ ವಾಸ್, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News