ರಮಝಾನ್ ತಿಂಗಳ ಒಂದು ದಿನ ಉಪವಾಸ ಆಚರಿಸುವ ವಿಕಾಸ್ ಖನ್ನಾ

Update: 2018-06-13 12:57 GMT

ಹೊಸದಿಲ್ಲಿ, ಜೂ.13: 1992ರಿಂದ ಪ್ರತಿ ವರ್ಷ ಪ್ರಸಿದ್ಧ ಚೆಫ್ ವಿಕಾಸ್ ಖನ್ನಾ ಅವರು ರಮಝಾನ್ ತಿಂಗಳ ಒಂದು ದಿನ ಉಪವಾಸ ಆಚರಿಸುತ್ತಾರೆ. 1992ರ ಮುಂಬೈ ಗಲಭೆಯ ಸಂದರ್ಭ ಮುಸ್ಲಿಂ ಕುಟುಂಬವೊಂದು ತನ್ನ ಪ್ರಾಣ ಉಳಿಸಿದ ನೆನಪಿಗಾಗಿ ವಿಕಾಸ್ ಖನ್ನಾ ವರ್ಷಂಪ್ರತಿ ಉಪವಾಸವನ್ನಾಚರಿಸುತ್ತಾರೆ. ಇದೀಗ 26 ವರ್ಷಗಳ ನಂತರ ನ್ಯೂಯಾರ್ಕ್ ಮೂಲದ ಈ ಸೆಲೆಬ್ರಿಟಿ ಚೆಫ್ ಕೊನೆಗೂ ತನ್ನ ಪ್ರಾಣ ಉಳಿಸಿದ ಕುಟುಂಬದ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಕೊನೆಗೂ ಆ ಕುಟುಂಬದೊಂದಿಗೆ ಸಂಪರ್ಕ ಸಾಧ್ಯವಾಗಿದ್ದು, ರಮಝಾನ್ ಉಪವಾಸವನ್ನು ಅವರೊಂದಿಗೆ ತೊರೆಯಲಿದ್ದೇನೆ ಎಂದು ಅವರು ಸೋಮವಾರ ಟ್ವೀಟ್ ಮಾಡಿದ್ದರು. ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿದ ಅವರು, “ಹೃದಯಪೂರ್ವಕ ಸಂಜೆ, ಎಲ್ಲಾ ಹೃದಯಗಳು, ಕಣ್ಣೀರು, ನೋವು, ಹೆಮ್ಮೆ, ಧೈರ್ಯ, ಮಾನವೀಯತೆ ಹಾಗು ಕೃತಜ್ಞತೆ” ಎಂದು ಬರೆದು ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ.

2015ರಲ್ಲಿ 1992ರಲ್ಲಿ ಏನು ನಡೆಯಿತು ಎನ್ನುವ ಬಗ್ಗೆ ಖನ್ನಾ ವಿವರಿಸಿದ್ದರು. “”1992ರ ಡಿಸೆಂಬರ್ ನಲ್ಲಿ ಗಲಭೆ ಸ್ಫೋಟಗೊಂಡಾಗ ನಾನು ಸೀ ರಾಕ್ ಶೆರಾಟನ್ ನಲ್ಲಿ ತರಬೇತಿಯಲ್ಲಿದ್ದೆ. ಇಡೀ ನಗರವೇ ಹೊತ್ತಿ ಉರಿಯುತ್ತಿತ್ತು. ನಾವು ಹಲವು ದಿನಗಳ ಕಾಲ ಹೊಟೇಲ್ ನಲ್ಲೇ ಬಾಕಿಯಾಗಿದ್ದೆವು. ಕರ್ಫ್ಯೂ ಹೇರಿದ್ದರಿಂದ ಯಾವ ಸಿಬ್ಬಂದಿಗೂ ಹೊಟೇಲ್ ನಿಂದ ಹೊರಗೆ ಹೋಗಲು  ಸಾಧ್ಯವಾಗುತ್ತಿರಲಿಲ್ಲ. ಗಲಭೆಯಿಂದ ಮುಂಬೈಯ ಘಟ್ಕೋಪರ್ ನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎನ್ನುವ ವದಂತಿ ನನ್ನ ಕಿವಿಗೆ ಬಿದ್ದಿತ್ತು. ಅಲ್ಲಿದ್ದ ನನ್ನ ಸಹೋದರ ಸುರಕ್ಷತೆಯ ಚಿಂತೆಯಲ್ಲಿ ಘಟ್ಕೋಪರ್ ಗೆ ತೆರಳಿದೆ. ಗಲಭೆಕೋರರ ಬಗ್ಗೆ ಎಚ್ಚರಿಕೆ ನೀಡಿದ ಮುಸ್ಲಿಮ್ ಕುಟುಂಬವೊಂದು ನನಗೆ ಆ ಸಂದರ್ಭ ಆಶ್ರಯ ನೀಡಿತು. ಕೂಡಲೇ ಸ್ಥಳಕ್ಕೆ ಬಂದ ಗುಂಪೊಂದು ನಾನು ಯಾರೆಂದು ಮನೆಯವರಲ್ಲಿ ಪ್ರಶ್ನಿಸಿತು. ನನ್ನನ್ನು ಅವರು ‘ನಮ್ಮ ಪುತ್ರ’ ಎಂದರು. 2 ದಿನಗಳ ಕಾಲ ನಾನು ಅಲ್ಲೇ ಮಲಗಿದ್ದೆ. ನನ್ನ ಸಹೋದರನನ್ನು ಹುಡುಕಲು ಕುಟುಂಬ ವ್ಯಕ್ತಿಯೊಬ್ಬರನ್ನು ಕಳುಹಿಸಿತು. ಆತನೂ ಸುರಕ್ಷಿತನಾಗಿದ್ದ. “ ಎಂದು ವಿಕಾಸ್ ಖನ್ನಾ ಈ ಹಿಂದೆ ವಿಡಿಯೋವೊಂದರಲ್ಲಿ ಹೇಳಿದ್ದರು.

“ಅಂದಿನಿಂದ ಇಂದಿನವರೆಗೆ ಪವಿತ್ರ ರಮಝಾನ್ ತಿಂಗಳ ಒಂದು ದಿನ ನಾನು ಉಪವಾಸ ಅಚರಿಸುತ್ತೇನೆ. ಈ ಮೂಲಕ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದು ಖನ್ನಾ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News