ಕೇಂದ್ರ ಮತ್ತು ರಾಜ್ಯ ಸರಕಾರಿ ಉದ್ಯೋಗಗಳಲ್ಲಿ ಭಡ್ತಿ ಮೀಸಲಾತಿ ಮುಂದುವರಿಕೆ:ಪಾಸ್ವಾನ್

Update: 2018-06-13 15:20 GMT

ಹೊಸದಿಲ್ಲಿ,ಜೂ.13: ಭಡ್ತಿಯಲ್ಲಿ ಮೀಸಲಾತಿಯನ್ನು ಪುನರಾರಂಭಿಸಲು ಕೇಂದ್ರಕ್ಕೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಅನುಮತಿಯು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಉದ್ಯೋಗಗಳಿಗೂ ಅನ್ವಯಿಸುತ್ತದೆ ಎಂದು ಬುಧವಾರ ಇಲ್ಲಿ ಉನ್ನತ ಮಟ್ಟದ ಸಭೆಯ ನಂತರ ಸಚಿವ ರಾಮವಿಲಾಸ್ ಪಾಸ್ವಾನ್ ಅವರು ಸುದ್ದಿಗಾರರಿಗೆ ತಿಳಿಸಿದರು.

 ನ್ಯಾಯಾಲಯದ ನಿರ್ದೇಶವು ಕೇಂದ್ರ ಸರಕಾರಿ ಉದ್ಯೋಗಗಳಿಗೆ ಮಾತ್ರ ಅನ್ವಯವಾಗಲಿದೆಯೇ ಎಂಬ ಪ್ರಶ್ನೆಯಿಂದಾಗಿ ಈ ಬಗ್ಗೆ ಕೊಂಚ ಗೊಂದಲವಿತ್ತಾದರೂ ಅದೀಗ ಬಗೆಹರಿದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೀಸಲಾತಿ ಆಧಾರದಲ್ಲಿ ಬಡ್ತಿ ಪ್ರಕ್ರಿಯೆಯನ್ನು ಆರಂಭಿಸಲಿವೆ ಎಂದ ಅವರು,ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಶೀಘ್ರವೇ ಈ ಸಂಬಂಧ ನಿರ್ದೇಶವನ್ನು ಹೊರಡಿಸಲಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಗೃಹಸಚಿವ ರಾಜನಾಥ ಸಿಂಗ್,ಕಾನೂನು ಸಚಿವ ರವಿಶಂಕರ ಪ್ರಸಾದ್,ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರಚಂದ್ ಗೆಹ್ಲೋಟ್ ಮತ್ತು ಪಾಸ್ವಾನ್ ಹಾಗೂ ಇತರನ್ನೊಳಗೊಂಡ ಸಚಿವರ ಸಮಿತಿಯು ಸಭೆ ಸೇರಿ ಈ ಬಗ್ಗೆ ಚರ್ಚಿಸಿತ್ತು. ವಿವಿಧ ಉಚ್ಚ ನ್ಯಾಯಾಲಯಗಳ ಆದೇಶಗಳಿಂದಾಗಿ ಸರಕಾರಿ ಉದ್ಯೋಗಗಳಲ್ಲಿ ಬಡ್ತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಮೀಸಲಾತಿ ಸ್ಥಗಿತಗೊಂಡಿತ್ತು ಮತ್ತು ಈ ಬಗ್ಗೆ ಕೇಂದ್ರವು ಇತ್ತೀಚಿಗೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಅಂತಿಮ ತೀರ್ಪು ಹೊರಬೀಳುವವರೆಗೆ ಬಡ್ತಿಯಲ್ಲಿ ಮೀಸಲಾತಿಯನ್ನು ಮುಂದುವರಿಸಲು ಹಸಿರು ನಿಶಾನೆಯನ್ನು ತೋರಿಸಿತ್ತು.

ಸರ್ವೋಚ್ಚ ನ್ಯಾಯಾಲಯದ ಆದೇಶದಿಂದಾಗಿ ದುರ್ಬಲಗೊಂಡಿರುವ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಮೂಲಸ್ಥಿತಿಗೆ ಮರಳಿಸಲು ಅಧ್ಯಾದೇಶವೊಂದನ್ನು ಹೊರಡಿಸಲು ಸರಕಾರವು ಸಿದ್ಧವಾಗಿದೆಯಾದರೂ,ತನ್ನ ಪುನರ್‌ಪರಿಶೀಲನೆ ಅರ್ಜಿಯ ಕುರಿತು ನ್ಯಾಯಾಲಯದ ಅಂತಿಮ ತೀರ್ಪಿಗಾಗಿ ಅದು ಕಾಯಲಿದೆ ಎಂದೂ ಪಾಸ್ವಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News