ಸೃಜನ್ ಹಗರಣ: ನಾಲ್ಕು ಹೊಸ ಪ್ರಕರಣ ದಾಖಲಿಸಿದ ಸಿಬಿಐ

Update: 2018-06-13 17:00 GMT

ಹೊಸದಿಲ್ಲಿ, ಜೂ.13: ಬಿಹಾರದಲ್ಲಿ ಸರಕಾರದ 800 ಕೋಟಿ ರೂ. ಮೊತ್ತವನ್ನು ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಯೊಂದು ದುರುಪಯೋಗಪಡಿಸಿಕೊಂಡಿರುವ ಹಗರಣಕ್ಕೆ ಸಂಬಂಧಿಸಿ ಸಿಬಿಐ ನಾಲ್ಕು ಹೊಸ ಪ್ರಕರಣ ದಾಖಲಿಸಿದೆ.

ಸೃಜನ್ ಹಗರಣ ಎಂದೇ ಕರೆಯಲಾಗುವ ಈ ಹಗರಣದಲ್ಲಿ ಸೃಜನ್ ಮಹಿಳಾ ವಿಕಾಸ ಸಹಯೋಗ ಸಮಿತಿ ಎಂಬ ಹೆಸರಿನ ಎನ್‌ಜಿಒ ಸಂಸ್ಥೆಯೊಂದರ ಎಲ್ಲಾ ಪದಾಧಿಕಾರಿಗಳ ಜೊತೆಗೆ ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡದ ಅಂದಿನ ಶಾಖಾ ವ್ಯವಸ್ಥಾಪಕರು, ಭೂಸ್ವಾಧೀನ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಸಿಬಿಐ ಸಲ್ಲಿಸಿದ ಒಂದು ಎಫ್‌ಐಆರ್‌ನಲ್ಲಿ ಎನ್‌ಜಿಒ ಸಂಸ್ಥೆಯ ಅಧ್ಯಕ್ಷೆ ಶುಭಲಕ್ಷ್ಮೀ ಪ್ರಸಾದ್ ಹಾಗೂ ಇತರ ಪದಾಧಿಕಾರಿಗಳ ಹೆಸರು ಒಳಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಸಿಬಿಐ 10 ಎಫ್‌ಐಆರ್ ದಾಖಲಿಸಿತ್ತು.

ಮಹಿಳೆಯರಿಗೆ ತರಬೇತಿ ನೀಡುವುದಾಗಿ ಪ್ರಕಟಿಸಿದ್ದ ಸಂಸ್ಥೆಯು 2003ರಿಂದ 2014ರ ಅವಧಿಯಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸರಕಾರಿ ಅಧಿಕಾರಿಗಳ ನೆರವಿನಿಂದ 800 ಕೋಟಿ ರೂ. ಮೊತ್ತವನ್ನು ಲಪಟಾಯಿಸಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News