ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಗಾಂಧಿಗಿರಿ ಮಾರ್ಗ ಅನುಸರಿಸಿದ ಉಪನ್ಯಾಯಾಧೀಶರು
ಕೊಚ್ಚಿ, ಜೂ.13: ಎರ್ನಾಕುಳಂ ಮಾರುಕಟ್ಟೆಯ ಬಳಿ ಹಲವು ದಿನಗಳಿಂದ ತ್ಯಾಜ್ಯ ವಿಲೇವಾರಿಯಾಗದೆ ಬೃಹತ್ ಪ್ರಮಾಣದಲ್ಲಿ ರಾಶಿಬಿದ್ದಿದ್ದ ಕಸವನ್ನು ವಿಲೇವಾರಿ ಮಾಡಲು ಕೊಚ್ಚಿಯ ಉಪ ನ್ಯಾಯಾಧೀಶ ಎ.ಎಂ.ಬಶೀರ್ ‘ಗಾಂಧಿಗಿರಿ’ ಮಾರ್ಗ ಅನುಸರಿಸಿದ ಬಗ್ಗೆ ವರದಿಯಾಗಿದೆ.
ಕಸ ವಿಲೇವಾರಿಯಾಗದೆ ಸ್ಥಳದಿಂದ ಕದಲುವುದಿಲ್ಲ ಎಂದು ಉಪನ್ಯಾಯಾಧೀಶರು ಕಸದ ರಾಶಿಯ ಬಳಿಯೇ ಧರಣಿ ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತ ಕೊಚ್ಚಿ ನಗರಪಾಲಿಕೆಯವರು ತಕ್ಷಣ ಕಾರ್ಯಪ್ರವೃತ್ತರಾಗಿ ಕಸದ ರಾಶಿಯನ್ನು ತೆರವುಗೊಳಿಸಲು ಮುಂದಾದರು. ಸುಮಾರು 30 ಲೋಡ್‌ನಷ್ಟು ಕಸ ವಿಲೇವಾರಿಯಾಗಿದ್ದು, ಸ್ಥಳ ಸಂಪೂರ್ಣ ಸ್ವಚ್ಛವಾಗಿದೆ ಎಂಬುದನ್ನು ಖಾತರಿಪಡಿಸಿಕೊಂಡ ಬಳಿಕ ಉಪನ್ಯಾಯಾಧೀಶರು ಅಲ್ಲಿಂದ ತೆರಳಿದ್ದಾರೆ.
‘ಸ್ವಚ್ಛ ಎರ್ನಾಕುಳಂ ನಗರ’ ಯೋಜನೆಯಡಿ ತಾನು ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯದ ರಾಶಿಯಿತ್ತು. ತ್ಯಾಜ್ಯ ವಿಲೇವಾರಿ ಹಲವು ದಿನಗಳಿಂದ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ಹಾಗೂ ಕಾರ್ಮಿಕರು ತಿಳಿಸಿದರು ಎಂದು ಉಪನ್ಯಾಯಾಧೀಶರು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ತ್ಯಾಜ್ಯ ಸಂಪೂರ್ಣ ತೆರವುಗೊಂಡ ಬಳಿಕ ಪ್ರತಿಭಟನೆ ಅಂತ್ಯಗೊಳಿಸಿದ ಅವರು, ಮಾರುಕಟ್ಟೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ನಿಯಮಿತವಾಗಿ ನಡೆಯುವುದನ್ನು ಖಾತರಿಗೊಳಿಸಲು ವ್ಯಾಪಾರಿಗಳು ಹಾಗೂ ಸ್ಥಳೀಯರ ಸಮಿತಿಯೊಂದನ್ನು ರಚಿಸುವುದಾಗಿ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಬಹುತೇಕ ಅಂಗಡಿಗಳು ಆಹಾರ ಮತ್ತು ಸುರಕ್ಷಾ ಇಲಾಖೆಯ ಪರವಾನಿಗೆ ರಹಿತವಾಗಿ ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದವರು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಲೇವಾರಿ ನಿಯಮಿತವಾಗಿ ನಡೆಯುತ್ತಿಲ್ಲ ಎಂಬ ಆರೋಪವನ್ನು ಕೊಚ್ಚಿ ನಗರಪಾಲಿಕೆ ನಿರಾಕರಿಸಿದೆ.