ಅಮೆರಿಕ, ಮೆಕ್ಸಿಕೊ, ಕೆನಡಾದ ಜಂಟಿ ಆತಿತ್ಯದಲ್ಲಿ 2026ರ ಫಿಫಾ ವಿಶ್ವಕಪ್

Update: 2018-06-13 18:25 GMT

ಮಾಸ್ಕೊ, ಜೂ.13: ಇಲ್ಲಿ ಬುಧವಾರ ನಡೆದ ಫಿಫಾ ಅಧಿವೇಶನದಲ್ಲಿ ವಿಶ್ವಕಪ್ ಟೂರ್ನಮೆಂಟ್‌ಗೆ ಮೂರು ರಾಷ್ಟ್ರಗಳ ಬಿಡ್‌ನ್ನು ಬಹುಮತದಿಂದ ಬೆಂಬಲಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ 2026ರ ವಿಶ್ವಕಪ್ ಟೂರ್ನಿಯು ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಮೊರೊಕ್ಕೊ ಐದನೇ ಬಾರಿ ವಿಶ್ವಕಪ್ ಆತಿಥ್ಯದ ಹಕ್ಕಿನಿಂದ ವಂಚಿತವಾಗಿದೆ.

   ವಿಶ್ವಕಪ್ ಆತಿಥ್ಯ ರಾಷ್ಟ್ರದ ಆಯ್ಕೆಗೆ ಮತದಾನ ನಡೆದಿದ್ದು ಉತ್ತರ ಅಮೆರಿಕನ್ ದೇಶಗಳು ಸಲ್ಲಿಸಿರುವ ಬಿಡ್ 134 ಮತಗಳನ್ನು ಪಡೆದರೆ, ಮೊರೊಕ್ಕೊಗೆ 65 ಮತಗಳು ಬಿದ್ದವು. ಓರ್ವ ಸದಸ್ಯ ತಟಸ್ಥ ನಿಲುವು ತಾಳಿದ್ದಾರೆ.

 2026ರ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿರುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ರಶ್ಯದಲ್ಲಿ ಗುರುವಾರ ಆರಂಭವಾಗಲಿರುವ ಈ ವರ್ಷದ ವಿಶ್ವಕಪ್‌ನಲ್ಲಿ 32 ತಂಡಗಳು ಸ್ಪರ್ಧಿಸಲಿವೆ. 2026ರ ವಿಶ್ವಕಪ್ ಟೂರ್ನಿಯಲ್ಲಿ 48 ತಂಡಗಳು ಸೆಣಸಾಡಲಿವೆ.

ಮಾಸ್ಕೊ ಎಕ್ಸ್‌ಪೊಸೆಂಟರ್‌ನಲ್ಲಿ ಫಿಫಾ ಅಧಿವೇಶನದ ಸಮ್ಮುಖದಲ್ಲಿ ಎರಡು ಬಿಡ್‌ಗಳಿಗೆ ಕೊನೆಯ ಅವಕಾಶ ನೀಡಲಾಗಿತ್ತು. ತಾವು ಟೂರ್ನಮೆಂಟ್ ಆಯೋಜಿಸುವುದರಿಂದ 11 ಬಿಲಿಯನ್ ಡಾಲರ್ ಲಾಭವಾಗಲಿದೆ ಎಂದು ನಾರ್ತ್ ಅಮೆರಿಕನ್ ದೇಶಗಳು ತಿಳಿಸಿದವು. ಮೊರೊಕ್ಕೊ 5 ಬಿಲಿಯನ್ ಡಾಲರ್ ಲಾಭ ಬರಬಹುದೆಂದು ಲೆಕ್ಕಾಚಾರ ಮಂಡಿಸಿತು.

 ಇದೇ ಮೊದಲ ಬಾರಿ ಮೂರು ದೇಶಗಳಿಗೆ ವಿಶ್ವಕಪ್ ಆತಿಥ್ಯದ ಹಕ್ಕನ್ನು ನೀಡಲಾಯಿತು. ಹೆಚ್ಚಿನ ಪಂದ್ಯಗಳು ಅಮೆರಿಕದಲ್ಲಿ ನಡೆಯಲಿದೆ.

ಒಟ್ಟು 80 ಪಂದ್ಯಗಳ ಪೈಕಿ 10 ಪಂದ್ಯಗಳು ಕೆನಡಾದಲ್ಲಿ, ಇನ್ನೂ 10 ಪಂದ್ಯಗಳು ಮೆಕ್ಸಿಕೊದಲ್ಲಿ ಹಾಗೂ 60 ಪಂದ್ಯಗಳು ಅಮೆರಿಕದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ನ್ಯೂ ಜೆರ್ಸಿಯ ಮೆಟ್‌ಲೈಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಅಮೆರಿಕ ಈ ಹಿಂದೆ 1994ರಲ್ಲಿ ವಿಶ್ವಕಪ್‌ನ ಆತಿಥ್ಯವಹಿಸಿಕೊಂಡಿತ್ತು. ಮೆಕ್ಸಿಕೊ 1970 ಹಾಗೂ 1986ರಲ್ಲಿ ವಿಶ್ವಕಪ್‌ನ್ನು ಆಯೋಜಿಸಿತ್ತು. ಕೆನಡಾ ಈ ತನಕ ಪುರುಷರ ವಿಶ್ವಕಪ್‌ನ ಆತಿಥ್ಯವಹಿಸಿಲ್ಲ. 2015ರಲ್ಲಿ ಮಹಿಳಾ ವಿಶ್ವಕಪ್ ಟೂರ್ನಿ ಕೆನಡಾದಲ್ಲಿ ನಡೆದಿತ್ತು.

  ಮೊರೊಕ್ಕೊ ಇದೀಗ ಐದನೇ ಬಾರಿ ವಿಶ್ವಕಪ್ ಬಿಡ್ ಸಲ್ಲಿಕೆಯಲ್ಲಿ ವಿಫಲವಾಗಿದೆ. 2010ರಲ್ಲಿ ವಿಶ್ವಕಪ್ ಆತಿಥ್ಯದ ಹಕ್ಕಿಗಾಗಿ ಕೊನೆಯ ಬಾರಿ ಫಿಫಾ ಅಧಿವೇಶನದಲ್ಲಿ ಮತದಾನ ನಡೆದಿತ್ತು. ಆಗ 2018ರ ಆತಿಥ್ಯಕ್ಕೆ ರಶ್ಯ ಹಾಗೂ 2022ರ ವಿಶ್ವಕಪ್ ಆತಿಥ್ಯಕ್ಕೆ ಕತರ್ ದೇಶವನ್ನು ಆಯ್ಕೆ ಮಾಡಲಾಗಿತ್ತು. ವಿಶ್ವಕಪ್ ಆತಿಥ್ಯ ತಂಡದ ಆಯ್ಕೆಗಾಗಿ ಫಿಫಾ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ಎಲ್ಲ ಅರ್ಹ ಫುಟ್ಬಾಲ್ ಫೆಡರೇಶನ್‌ಗಳು ಫಿಫಾ ಅಧಿವೇಶನದಲ್ಲಿ ಹಾಜರಿದ್ದು ಮತ ಹಾಕಬೇಕು.

ಎರಡೂ ಬಿಡ್‌ದಾರರು ಜಗತ್ತಿನಾದ್ಯಂತ ಪ್ರಯಾಣಿಸಿ ವಿಶ್ವವ್ಯಾಪಿ ಮತದಾರರನ್ನು ಗೆಲ್ಲಲು ಯತ್ನಿಸಬೇಕು.

‘‘ಮೂರು ರಾಷ್ಟ್ರಗಳಿಗೆ ವಿಶ್ವಕಪ್ ಆತಿಥ್ಯನೀಡಿರುವುದರಿಂದ 14 ಬಿಲಿಯನ್ ಡಾಲರ್ ಆದಾಯ ಬರಲಿದೆ. ಫಿಫಾಕ್ಕೆ 11 ಬಿಲಿಯನ್ ಡಾಲರ್ ಲಾಭವಾಗಲಿದೆ. ಬಿಡ್‌ನಿಂದ ದಾಖಲೆಯ ಪ್ರಮಾಣದ ಟಿಕೆಟ್‌ಗಳು ಮಾರಾಟವಾಗಲಿದೆ. ಆತಿಥ್ಯದ ಆದಾಯವೂ ಹೆಚ್ಚಳವಾಗಲಿದೆ’’ ಎಂದು ಅಮೆರಿಕ ಸಾಕರ್ ಫೆಡರೇಶನ್ ಅಧ್ಯಕ್ಷ ಕಾರ್ಲೊಸ್ ಕಾರ್ಡಿರೊ ಹೇಳಿದ್ದಾರೆ.

2022ರ ವಿಶ್ವಕಪ್ ಟೂರ್ನಮೆಂಟ್ ಕತರ್ ಆತಿಥ್ಯದಲ್ಲಿ ನಡೆಯಲಿದೆ. 2018ರ ವಿಶ್ವಕಪ್ ಟೂರ್ನಿಗೆ ಗುರುವಾರ ಆತಿಥೇಯ ರಶ್ಯ ತಂಡವನ್ನು ಸೌದಿ ಅರೇಬಿಯ ಮುಖಾಮುಖಿ ಯಾಗುವುದರೊಂದಿಗೆ ಚಾಲನೆ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News