'ಟೈಮ್ಸ್ ನೌ' ಚಾನೆಲ್ ನ ರಾಹುಲ್ ಶಿವಶಂಕರ್, ಆನಂದ್ ನರಸಿಂಹನ್ ಗೆ ನ್ಯಾಯಾಲಯದ ಸಮನ್ಸ್

Update: 2018-06-14 11:01 GMT

ಮಲಪ್ಪುರಂ, ಜೂ.14:  ಹಿಂದೂ ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ಅವರಿಗೆ ಅಡಗಿಕೊಳ್ಳಲು ಸುರಕ್ಷಿತ ತಾಣ ಒದಗಿಸುತ್ತಿರುವುದಾಗಿ ತನ್ನ ವಿರುದ್ಧ  ಟಿವಿ ಕಾರ್ಯಕ್ರಮವೊಂದರಲ್ಲಿ ಆರೋಪ ಹೊರಿಸಿದ 'ಟೈಮ್ಸ್ ನೌ' ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ರಾಹುಲ್ ಶಿವಶಂಕರ್ ಹಾಗೂ ಶೋ ಆ್ಯಂಕರ್ ಆನಂದ್ ನರಸಿಂಹನ್ ವಿರುದ್ಧ ನ್ಯಾಷನಲ್ ವಿಮೆನ್ಸ್ ಫ್ರಂಟ್ ಅಧ್ಯಕ್ಷೆ ಎ.ಎಸ್. ಝೈನಬಾ ದಾಖಲಿಸಿದ ದೂರಿನ ಆಧಾರದಲ್ಲಿ ಮಲಪ್ಪುರಂ ಜೆಎಂಎಫ್‍ಸಿ ನ್ಯಾಯಾಲಯ ಅವರಿಬ್ಬರಿಗೂ ಸಮನ್ಸ್ ಹೊರಡಿಸಿದೆ. ಇಬ್ಬರೂ ಆಗಸ್ಟ್ 30ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ.

'ಹಿಂದೂ ಗರ್ಲ್ಸ್ ಆರ್ ಹಂಟೆಡ್, ಕನ್ವರ್ಟೆಡ್, ಎಕ್ಸ್ ಪ್ಲಾಯ್ಟೆಡ್ ಇನ್ ಕೇರಳ' ಎಂಬ ಹೆಸರಿನ ಈ ಟಿವಿ ಶೋ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಪ್ರಸಾರವಾಗಿತ್ತಲ್ಲದೆ ಝೈನಬಾ ಅವರು ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವತಿಯರ `ಪೋಷಕಿ'ಯಾಗಿದ್ದರು ಎಂದು  'ರಹಸ್ಯ ಎನ್‍ಐಎ ವರದಿ'ಯೊಂದು ಕಂಡುಕೊಂಡಿತ್ತು ಎಂದು ಆರೋಪಿಸಲಾಗಿತ್ತು.

ವರದಿಯು ತನ್ನನ್ನು, ಮುಸ್ಲಿಂ ಸಮಾಜವನ್ನು ಅವಹೇಳನಗೈಯ್ಯಲು ಉಪಯೋಗಿಸಲಾಗುವ 'ಲವ್ ಜಿಹಾದ್'ನೊಂದಿಗೆ ಥಳಕು ಹಾಕಿತ್ತು ಎಂದು ತಮ್ಮ ವಕೀಲ ಎಂ.ಪಿ. ಅಬ್ದುಲ್ ಲತೀಫ್ ಮುಖಾಂತರ ದಾಖಲಿಸಿರುವ ದೂರಿನಲ್ಲಿ ಝೈನಬಾ ಆರೋಪಿಸಿದ್ದಾರಲ್ಲದೆ ಈ ವರದಿಯಿಂದಾಗಿ ತನ್ನ ಸಾಮಾಜಿಕ ಘನತೆ ಕುಸಿದಿದೆ ಎಂದೂ ಹೇಳಿದ್ದಾರೆ.

ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಹಾದಿಯಾ ಪ್ರಕರಣದಲ್ಲಿ ಹಾದಿಯಾ ಇಸ್ಲಾಂ ಬಗ್ಗೆ ಅಧ್ಯಯನ ನಡೆಸಲು ತನ್ನ ಮನೆ ತೊರೆದಾಗ ಹಾಗೂ ತನ್ನ ಹೆತ್ತವರ ಜತೆ ತೆರಳಲು ಹೈಕೋರ್ಟಿನಲ್ಲಿ ನಿರಾಕರಿಸಿದಾಗ ಝೈನಬಾ ಹದಿಯಾಳ ಪೋಷಕರಾಗಿದ್ದರು. ಸುಪ್ರೀಂ ಕೋರ್ಟ್ ಈ ವರ್ಷದ ಮಾರ್ಚ್ ತಿಂಗಳಲ್ಲಿ ಶಫಿನ್ ಜಹಾನ್ ಜತೆ ಹಾದಿಯಾ ವಿವಾಹ ಊರ್ಜಿತಗೊಳಿಸಿ ಕೇರಳ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದೆ.

ಕೃಪೆ: www.livelaw.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News