×
Ad

ಹಿಂಸಾಚಾರಕ್ಕೆ ಅಭಿವೃದ್ಧಿ ಕಾರ್ಯವೇ ಸೂಕ್ತ ಉತ್ತರ: ಪ್ರಧಾನಿ ಮೋದಿ

Update: 2018-06-14 23:05 IST

ರಾಯ್‌ಪುರ, ಜೂ.14: ಎಲ್ಲಾ ರೀತಿಯ ಹಿಂಸಾಚಾರಕ್ಕೂ ಅಭಿವೃದ್ಧಿ ಕಾರ್ಯವೇ ಸೂಕ್ತ ಉತ್ತರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಛತ್ತೀಸ್‌ಗಢದಲ್ಲಿ ಹಲವು ಯೋಜನೆಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.

ಈ ಹಿಂದೆ ಬಸ್ತಾರ್ ಎಂಬ ಹೆಸರು ಕೇಳಿದೊಡನೆ ಬಂದೂಕು, ಬಾಂಬ್ ಹಾಗೂ ಹಿಂಸಾಚಾರದ ನೆನಪಾಗುತ್ತಿತ್ತು. ಆದರೆ ಈಗ ಈ ಪ್ರದೇಶವು ಜಗದಾಳ್‌ಪುರ ವಿಮಾನನಿಲ್ದಾಣದ ಕಾರಣ ಪ್ರಸಿದ್ಧವಾಗಿದೆ. ಯಾವುದೇ ರೀತಿಯ ಹಿಂಸಾಚಾರವಿರಲಿ, ಅದಕ್ಕೆ ಅಭಿವೃದ್ಧಿ ಕಾರ್ಯವೇ ಸೂಕ್ತ ಉತ್ತರವಾಗಿದೆ ಎಂಬ ವಿಶ್ವಾಸ ತನಗಿದೆ ಎಂದು ಪ್ರಧಾನಿ ಹೇಳಿದರು.

ಜಗದಾಳ್‌ಪುರದಿಂದ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಪ್ರಥಮ ವಿಮಾನಯಾನವನ್ನು ಇದೇ ಸಂದರ್ಭ ಅವರು ಉದ್ಘಾಟಿಸಿದರು. ಈ ಹಿಂದಿನ ಸರಕಾರಗಳು ರಸ್ತೆ ನಿರ್ಮಿಸಲೂ ಹಿಂಜರಿಯುತ್ತಿದ್ದ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜ್ಯ ಸರಕಾರದ ಸಹಯೋಗದಿಂದ ವಿಮಾನ ನಿಲ್ದಾಣವನ್ನು ನಿರ್ಮಿಸಿದೆ. ಬಸ್ತಾರ್ ಪ್ರದೇಶದ ಹಲವು ಯುವಜನರು ಹಿಂಸಾಚಾರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು. ರಾಯ್‌ಪುರ ಮತ್ತು ಜಗದಾಳ್‌ಪುರದ ನಡುವಿನ ಪ್ರಯಾಣದ ಅವಧಿ ಈ ಹಿಂದೆ ಸುಮಾರು 7 ಗಂಟೆ ಇದ್ದರೆ ಈಗ 40 ನಿಮಿಷಕ್ಕೆ ಇಳಿದಿದೆ. ನಮ್ಮ ಸರಕಾರದ ಕಾರ್ಯನೀತಿಯ ಕಾರಣ ಈಗ ರೈಲುಗಳ ಎಸಿ ಬೋಗಿಗಳಲ್ಲಿ ಪ್ರಯಾಣಿಸುವವರಿಗಿಂತ ಹೆಚ್ಚು ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾರೆ. ಸಂಪರ್ಕ ವ್ಯವಸ್ಥೆ ಹೆಚ್ಚಿದಂತೆಲ್ಲಾ ಉದ್ದಿಮೆಗಳನ್ನು ಆಕರ್ಷಿಸುತ್ತವೆ ಮತ್ತು ಇದರಿಂದ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದು ಪ್ರಧಾನಿ ಹೇಳಿದರು.

   ಇದಕ್ಕೂ ಮೊದಲು ಅವರು ವಿಸ್ತರಿತ ಮತ್ತು ಆಧುನೀಕರಣಗೊಂಡ ಭಿಲಾಯ್ ಸ್ಟೀಲ್ ಪ್ಲಾಂಟ್ ಅನ್ನು ಲೋಕಾರ್ಪಣೆಗೊಳಿಸಿದರು. ಶಾಂತಿ, ಸ್ಥಿರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಅಭಿವೃದ್ಧಿ ಕಾರ್ಯದ ಮೂಲ ಅಗತ್ಯವಾಗಿದ್ದು ಛತ್ತೀಸ್‌ಗಢದ ಆಡಳಿತಾರೂಢ ಬಿಜೆಪಿ ಸರಕಾರ ಇದನ್ನು ಸಾಧ್ಯವಾಗಿಸಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದೆ. ಛತ್ತೀಸ್‌ಗಢದಿಂದ ಹೊರತೆಗೆಯುವ ಖನಿಜ ಸಂಪನ್ಮೂಲದಿಂದ ದೊರಕುವ ಆದಾಯದ ಸ್ವಲ್ಪ ಅಂಶವನ್ನು ಆದಿವಾಸಿಗಳು ಸೇರಿದಂತೆ ರಾಜ್ಯದ ಜನರ ಕ್ಷೇಮಾಭ್ಯುದಯಕ್ಕೆ ಬಳಸಲಾಗುವುದು ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News