ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಪಿಎಚ್‌ಡಿ ಕಡ್ಡಾಯ

Update: 2018-06-14 17:38 GMT

ಹೊಸದಿಲ್ಲಿ, ಜೂ.14: 2021-22ರಿಂದ ವಿಶ್ವವಿದ್ಯಾನಿಲಯಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನೇರ ನೇಮಕಾತಿಗೆ ಪಿಎಚ್‌ಡಿ ಪದವಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರದ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

ಆದರೆ ಕಾಲೇಜುಗಳಲ್ಲಿ ನೇರ ನೇಮಕಾತಿಗೆ ಸ್ನಾತಕೋತ್ತರ ಪದವಿ ಜೊತೆಗೆ ಎನ್‌ಇಟಿ ಅಥವಾ ಪಿಎಚ್‌ಡಿ ಅರ್ಹತೆ ಅಗತ್ಯ ಎಂಬ ನಿಯಮ ಮುಂದುವರಿಯುತ್ತದೆ ಎಂದವರು ತಿಳಿಸಿದ್ದಾರೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ದ ನಿಯಮಾವಳಿಗಳನ್ನು ಘೋಷಿಸಿದ ಸಚಿವರು, ಈ ಹಿಂದೆ ಕಾಲೇಜು ಅಧ್ಯಾಪಕರಿಗೆ ಕಡ್ಡಾಯಗೊಳಿಸಲಾಗಿದ್ದ ‘ಅಕಾಡೆಮಿಕ್ ಪರ್ಪಾಮೆನ್ಸ್ ಇಂಡಿಕೇಟರ್ಸ್(ಎಪಿಐ)’ ಅನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಿ, ಶ್ರೇಷ್ಟ ಪ್ರತಿಭೆಗಳನ್ನು ಆಕರ್ಷಿಸಿ ದೇಶದಲ್ಲೇ ಉಳಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ.ಈ ಹಿಂದಿನ ನಿಯಮಾವಳಿಗಳಲ್ಲಿ ಘೋಷಿಸಲಾಗಿದ್ದ ಎಲ್ಲಾ ಉತ್ತೇಜನಗಳನ್ನೂ ಮುಂದುವರಿಸಲಾಗಿದೆ. ಆದರೆ ಕಾಲೇಜು ಅಧ್ಯಾಪಕರಿಗೆ ಕಡ್ಡಾಯ ಮಾಡಲಾಗಿದ್ದ ಎಪಿಐಯನ್ನು ರದ್ದುಗೊಳಿಸಿದ್ದು ಈಗ ಶಿಕ್ಷಕರು ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರತ್ತ ಹೆಚ್ಚಿನ ಗಮನ ನೀಡಬಹುದು. ಅಲ್ಲದೆ, 2021ರಿಂದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಬಡ್ತಿ ದೊರಬೇಕಿದ್ದರೆ ಪಿಎಚ್‌ಡಿ ಪದವಿ ಹೊಂದಿರುವುದು ಕಡ್ಡಾಯವಾಗಿದೆ. ಇದಕ್ಕಾಗಿ 3 ವರ್ಷದ ಕಾಲಾವಧಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಶಿಕ್ಷಕರ ಕಾರ್ಯನಿರ್ವಹಣೆಯ ವರ್ಗೀಕರಣಕ್ಕೆ ನೂತನ ಸರಳೀಕೃತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಇದನ್ನು ಪದೋನ್ನತಿಯ ಸಂದರ್ಭ ಪರಿಗಣಿಸಲಾಗುವುದು ಎಂದು ಜಾವಡೇಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News