ಗುಂಡಿನ ಚಕಮಕಿ: ಯೋಧ ಹುತಾತ್ಮ, ಇಬ್ಬರು ಉಗ್ರರು ಹತ

Update: 2018-06-14 18:00 GMT

ಶ್ರೀಗರ, ಜೂ. 14: ಜಮ್ಮು ಹಾಗೂ ಕಾಶ್ಮೀರದ ಬಂಡಿಪೋರ ಜಿಲ್ಲಿಯಲ್ಲಿ ಗುರುವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ‘‘ಬಂಡಿಪೋರ ಜಿಲ್ಲೆ (ಉತ್ತರ ಕಾಶ್ಮೀರ)ಯ ಪನಾರ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ. ಓರ್ವ ಯೋಧ ಹುತಾತ್ಮರಾಗಿದ್ದಾರೆ’’ ಎಂದು ರಕ್ಷಣಾ ಇಲಾಖೆಯ ವಕ್ತಾರ ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಯೋಧನೋರ್ವ ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘‘ಪಾನಾರ್ ಪ್ರದೇಶದ ಸಮೀಪದ ರಾಯ್ನಾರ್ ಅರಣ್ಯದಲ್ಲಿ ಕಾರ್ಯಾಚರಣೆಯನ್ನು ಕಳೆದ ವಾರ ಆರಂಭಿಸಲಾಗಿತ್ತು. ಈ ಕಾರ್ಯಾಚರಣೆ ಇಂದು 6ನೇ ದಿನಕ್ಕೆ ಕಾಲಿರಿಸಿದೆ’’ ಎಂದು ಅವರು ಹೇಳಿದ್ದಾರೆ.

ಯೋಧನ ಅಪಹರಣ 

ಈ ನಡುವೆ ರಜೆ ತೆಗೆದುಕೊಂಡು ಜಮ್ಮಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸೇನಾ ಯೋಧನೋರ್ವನನ್ನು ಉಗ್ರರು ಅಪಹರಿಸಿದ್ದಾರೆ. 44 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದ ಔರಂಗಜೇಬ್ ಅವರನ್ನು ಶೋಫಿಯಾನದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರು ಉಗ್ರ ವಿರೋಧಿ ಕಾರ್ಯಾಚರಣೆಯ ಪಾಲ್ಗೊಂಡಿದ್ದರು. ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News