ಏನಾಗುತ್ತಿದೆ ದೇಶದಲ್ಲಿ? ನಮ್ಮ ಪ್ರಜಾತಾಂತ್ರಿಕ ಹಕ್ಕುಗಳೆಲ್ಲಿ?

Update: 2018-06-15 07:05 GMT

ದೇಶದಲ್ಲಿ ಇಂದು ಪ್ರಜಾತಂತ್ರವಾದಿಗಳ, ಪ್ರಗತಿಪರರ, ಮಾನವ ಹಕ್ಕು ಹೋರಾಟಗಾರರ, ದಲಿತ ಆದಿವಾಸಿ ಪರವಾಗಿರುವವರ ಬಂಧನ ಪರ್ವ ಶುರುವಾಗಿದೆ. ಇದು ಈಗಷ್ಟೇ ಶುರುವಾಗಿದ್ದಲ್ಲ. ಇದು ಶುರುವಾಗಿ ಬಹಳ ಕಾಲವಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭುತ್ವ ಮತ್ತು ಮತ್ತದರ ನೀತಿಗಳನ್ನು ಟೀಕಿಸಿದ ಕಾರಣಕ್ಕೆ, ವ್ಯಂಗ್ಯಚಿತ್ರಗಳಲ್ಲಿ ಬಿಂಬಿಸಿದ ಕಾರಣಕ್ಕೇ ಹಲವಾರು ಜನರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದು ದೇಶಾದ್ಯಂತ ವಿವಾದವನ್ನು ಸೃಷ್ಟಿಸಿತ್ತು. ಜವಾಹರಲಾಲ್ ವಿಶ್ವವಿದ್ಯಾನಿಲಯವನ್ನು ಸಂಘಪರಿವಾರದ ಹಿಡಿತಕ್ಕೆ ಕೊಡುವ ಹುನ್ನಾರವನ್ನು ಪ್ರತಿಭಟಿಸಿದ್ದಕ್ಕಾಗಿ ಅಲ್ಲಿನ ಪ್ರಾಧ್ಯಾಪಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದಲ್ಲದೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಈ ರೀತಿಯಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಗಳ ಭಾಗವಾಗಿರುವ ಟೀಕೆ, ಚರ್ಚೆ, ಸಂವಾದ, ವಿರೋಧ, ಪ್ರತಿಭಟನೆ ಮಾಡುವವರನ್ನು ಬೆದರಿಸಿ ದನಿ ಅಡಗಿಸುವ ಕೆಲಸಗಳು ಮೋದಿ ಸರಕಾರ ಬಂದಾಗಿನಿಂದ ಜಾಸ್ತಿಯಾಗಿದೆ ಎನ್ನಬಹುದು. ಉತ್ತರಪ್ರದೇಶದಲ್ಲಿ ದಲಿತ, ಹಿಂದುಳಿದವರನ್ನು ಸಂಘಟಿಸಿ ಜನರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸುತ್ತಾ ಸರಕಾರಗಳ ಜನವಿರೋಧಿ ನೀತಿಗಳನ್ನು ಟೀಕಿಸಿದ ಕಾರಣಕ್ಕೆ ಚಂದ್ರಶೇಖರ ಆಝಾದ್ ರಾವಣ್‌ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ವಿಚಾರಣೆ ಇಲ್ಲದಂತೆ ಮಾಡಿ ಜೈಲಿನಲ್ಲಿ ಕೊಳೆಸಲಾಗುತ್ತಿದೆ. ಈ ಕುತಂತ್ರವನ್ನು ಅವರು ತಮ್ಮ ಮೇಲೆ ಹೂಡಿದ್ದ ಸುಳ್ಳು ಪ್ರಕರಣಗಳಿಗೆ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದ ಮೇಲೆ ಮಾಡಲಾಗಿತ್ತು.

ಚಂದ್ರಶೇಖರ ಆಝಾದ್ ಮೇಲಿನ ಈ ಕ್ರಮವನ್ನು ಖಂಡಿಸಿ ದೇಶಾದ್ಯಂತ ಬುದ್ಧಿಜೀವಿಗಳು, ಮಾನವ ಹಕ್ಕು ಹೋರಾಟಗಾರರು ಹೋರಾಟ ನಡೆಸುತ್ತಾ ಬಂದಿದ್ದರು. ದಿಲ್ಲಿ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಜಿ.ಎನ್‌ಸಾಯಿಬಾಬಾರನ್ನು ಬಂಧಿಸಿದಾಗಿನಿಂದ ಅದು ತೀವ್ರ ಸ್ವರೂಪ ಪಡೆಯಿತೆನ್ನಬಹುದು. ಸಾಯಿಬಾಬಾ ಶೇ. 90ರಷ್ಟು ಅಂಗವೈಕಲ್ಯವನ್ನು ಮತ್ತು ಹಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು. ಅವರ ಬಳಿ ಯಾವುದೋ ಪತ್ರ ಸಿಕ್ಕಿದೆಯೆಂದು, ಅದು ಭೂಗತ ರಾಜಕೀಯ ಸಂಘಟನೆಯಾದ ಸಿಪಿಐ ಮಾವೋಯಿಸ್ಟ್‌ನ ನಾಯಕರು ಯಾರೋ ಬರೆದಿದ್ದೆಂದು ಆರೋಪ ಹೊರಿಸಿ ಬಂಧಿಸಲಾಗಿತ್ತು. ಯಾವುದೇ ನೇರ ಸಾಕ್ಷಿ ಇಲ್ಲದಿದ್ದರೂ ಸಾಂದರ್ಭಿಕ ಸಾಕ್ಷಿಗಳ ಹೆಸರಿನಲ್ಲಿ ಆರೋಪ ಸಾಬೀತಾಯಿತೆಂದು ವಿಚಾರಣಾ ನ್ಯಾಯಾಲಯ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಜೈಲಿಗೆ ಹಾಕಿದೆ. ಅಲ್ಲಿ ಅವರಿಗೆ ಸರಿಯಾದ ವೈದ್ಯಕೀಯ ಸೌಲಭ್ಯವನ್ನೂ ಒದಗಿಸದೆ ಕತ್ತಲ ಕೋಣೆಯಲ್ಲಿ ಇಡಲಾಗಿದೆ ಎಂದು ಸ್ವತಃ ಸಾಯಿಬಾಬಾರೇ ತಮ್ಮ ಪತ್ರದಲ್ಲಿ ಹೇಳಿಕೊಂಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅವರ ಜೀವನ ಸಂಗಾತಿ ವಸಂತಾರವರು ನೀಡಿದ ಹೇಳಿಕೆಗಳಲ್ಲೂ ಇದು ವ್ಯಕ್ತವಾಗಿದೆ.

ಡಾ. ಜಿ ಎನ್. ಸಾಯಿಬಾಬಾರ ಪ್ರಾಣ ಉಳಿಸಲು ಮತ್ತು ಅವರನ್ನು ಬಂಧನದಿಂದ ಬಿಡಿಸಲು ಹಲವಾರು ಪ್ರಾಧ್ಯಾಪಕರು, ವಕೀಲರು, ಸಾಹಿತಿಗಳು, ಮಾನವ ಹಕ್ಕು ಹೋರಾಟಗಾರರು ಸಮಿತಿಯೊಂದನ್ನು ರಚಿಸಿಕೊಂಡು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆ ಸಮಿತಿಯಲ್ಲಿ ಇರುವವರನ್ನೂ ಕೂಡ ಸಾಯಿಬಾಬಾರ ಮೇಲೆ ಹೊರಿಸಿದಂತಹ ಆರೋಪದಡಿಯಲ್ಲಿಯೇ ಇತ್ತೀಚೆಗೆ ಬಂಧಿಸಲಾಗಿದೆ. ಅಲ್ಲದೆ ದಲಿತರು ಮತ್ತು ಆದಿವಾಸಿಗಳ ಪರವಾಗಿ, ಮಾನವ ಹಕ್ಕುಗಳ ಪರವಾಗಿ ದನಿಯೆತ್ತುತ್ತಿದ್ದವರನ್ನೂ ಅದೇ ನೆಪದಲ್ಲಿ ಬಂಧಿಸಲಾಗಿದೆ. ಇವರ ಮೇಲೆ ಭೀಮ ಕೋರೆಗಾಂವ್ ಹಿಂಸಾಚಾರದ ಪ್ರಕರಣಗಳನ್ನೂ ಹೊರಿಸಲಾಗಿದೆ. ಎಲ್ಲವನ್ನೂ ಸೇರಿಸಿ ಕಾನೂನು ವಿರೋಧಿ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆಯಂತಹ (UAPA) ಕರಾಳ ಕಾಯ್ದೆಯ ಹಲವಾರು ಸೆಕ್ಷನ್‌ಗಳನ್ನು ಹೊರಿಸಲಾಗಿದೆ. ಈ ಕಾನೂನಿನಡಿಯಲ್ಲಿ ಆರು ತಿಂಗಳುಗಳ ಕಾಲ ವಿಚಾರಣೆ ಇಲ್ಲದೆ ಬಂಧನದಲ್ಲಿಡುವ ಅವಕಾಶ ಸರಕಾರಕ್ಕೆ ಇದೆ. ಅಗತ್ಯವಿದ್ದಲ್ಲಿ ಅದನ್ನು ಮತ್ತೂ ವಿಸ್ತರಿಸಲು ಕೂಡ ಅವಕಾಶ ಇದೆ. ಆರು ತಿಂಗಳ ಕಾಲ ಆರೋಪಪಟ್ಟಿಯನ್ನು ಕೂಡ ಹಾಜರುಪಡಿಸದೆ ಇರಬಹುದು. ಆ ಅವಧಿಯನ್ನು ಮತ್ತೂ ವಿಸ್ತರಿಸಲೂ ಕೂಡ ಸಾಧ್ಯತೆ ಇದೆ. ಆದರೆ ಇದೇ ವೇಳೆಯಲ್ಲಿ ಭೀಮಾ ಕೋರೆಗಾಂವ್ ಗಲಭೆ ಹಾಗೂ ಹತ್ಯೆಗೆ ನೇರ ಕಾರಣರಾದವರ ಮೇಲೆ ಸರಕಾರ ಈಗಲೂ ಸರಿಯಾದ ಕ್ರಮ ಜರುಗಿಸದೆ ಇರುವುದು ಆಶ್ಚರ್ಯವೇನೂ ಅಲ್ಲ.

ಈಗ ಬಂಧಿಸಲ್ಪಟ್ಟಿರುವ ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾಯರ್ಸ್‌ನ ಮಹಾಕಾರ್ಯದರ್ಶಿ ನಾಗಪುರದ ವಕೀಲ ಸುರೇಂದ್ರ ಗಾಡ್ಲಿಂಗ್, ನಾಗಪುರ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ಹಾಗೂ ಮಹಿಳೆಯರ ಮೇಲಿನ ಪುರುಷಾಧಿಪತ್ಯ ಮತ್ತು ಪ್ರಭುತ್ವದ ಹಿಂಸಾ ವಿರೋಧಿ ವೇದಿಕೆಯ ಶೋಮಾ ಸೇನ್, ಮುಂಬೈನ ಮರಾಠಿ ಭಾಷೆಯ ವಿದ್ರೋಹಿ ಪತ್ರಿಕೆಯ ಸಂಪಾದಕರಾದ ಸುಧೀರ್ ಧಾವಲೆ, ರಾಜಕೀಯ ಬಂಧಿಗಳ ಬಿಡುಗಡೆಗಾಗಿನ ಸಮಿತಿಯ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ರೋನಾ ವಿಲ್ಸನ್, ಜನರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಹೋರಾಡುತ್ತಿರುವ ನಿರ್ವಸತೀಕರಣ ವಿರೋಧಿ ಕಾರ್ಯಕರ್ತ ಹಾಗೂ ಹಿಂದೆ ಪ್ರಧಾನ ಮಂತ್ರಿಗಳ ಗ್ರಾಮೀಣಾಭಿವೃದ್ಧಿಯ ಫೆಲೋ ಆಗಿದ್ದ ಮಹೇಶ್ ರೌತ್ ಇವರೆಲ್ಲರೂ ಸರಕಾರದ ಕಾರ್ಪೊರೇಟ್ ಪರ ನೀತಿಗಳನ್ನು, ಅದಕ್ಕಾಗಿ ದಲಿತರು ಆದಿವಾಸಿಗಳು ಇನ್ನಿತರ ಜನಸಮುದಾಯಗಳ ಬದುಕುಗಳನ್ನು ಬಲಿಕೊಡುತ್ತಿರುವುದನ್ನು ಖಂಡಿಸಿ ಹೋರಾಡುತ್ತಾ ಬಂದವರಾಗಿದ್ದರು. ಅಷ್ಟೇ ಅಲ್ಲದೆ ಭೀಮಾ ಕೋರೆಗಾಂವ್ ಗಲಭೆಗೆ ಕಾರಣರಾದ ಸಂಘ ಪರಿವಾರದ ವ್ಯಕ್ತಿಗಳನ್ನು ಬಂಧಿಸುವಂತೆ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದರು.

ಈ ಎಲ್ಲಾ ಬೆಳವಣಿಗೆಗಳನ್ನು ನಾವು ಗಮನಿಸಿದಾಗ ನಮ್ಮ ದೇಶದ ಪರಿಸ್ಥಿತಿ ಮತ್ತು ಇಂದು ಕ್ರಮಿಸುತ್ತಿರುವ ಹಾದಿ ನಮಗೆ ಅರ್ಥವಾಗುತ್ತದೆ. ಇಲ್ಲಿ ಇದುವರೆಗೂ ಹೇಳಿಕೊಂಡು ಬರುತ್ತಿದ್ದ ಪ್ರಜಾಪ್ರಭುತ್ವವನ್ನೂ ನಾವಿಂದು ಕಾಣಲು ಸಾಧ್ಯವಿಲ್ಲದಂತಹ ಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ವಸಾಹತು ಕಾಲದ್ದಕ್ಕಿಂತಲೂ ಕರಾಳವಾದ ಶಾಸನಗಳನ್ನು ಜನಸಾಮಾನ್ಯರು ಮತ್ತು ಅವರ ಪರವಾಗಿರುವವರ ಮೇಲೆ ಹೇರಲಾಗುತ್ತಿದೆ. ಇಲ್ಲಿ ಜನರ ದನಿಗಳನ್ನು ಅಡಗಿಸುವ ಪ್ರಯತ್ನವಷ್ಟೇ ಅಲ್ಲದೆ ಆಳುವ ಶಕ್ತಿಗಳಿಗೆ ಯಾವುದೇ ಅಡೆತಡೆಗಳು ಇರದಂತಹ ಒಂದು ನಿರಂಕುಶ ವ್ಯವಸ್ಥೆಯೊಂದನ್ನು ಸಂಪೂರ್ಣವಾಗಿ ದೇಶಾದ್ಯಂತ ಹೇರುವ ತಯಾರಿಗಳನ್ನು ಆಳುವ ಶಕ್ತಿಗಳು ನಡೆಸುತ್ತಿವೆ.

ಜಾಗತಿಕವಾಗಿ ಭಾರೀ ಮಟ್ಟದಲ್ಲಿ ತೀವ್ರಗೊಂಡಿರುವ ಕಾರ್ಪೊರೇಟು ಗಳ ಸ್ಪರ್ಧೆ ಮತ್ತು ಕಚ್ಚಾಟಗಳಿಂದಾಗಿ ಕುಸಿಯುತ್ತಿರುವ ತಮ್ಮ ಸೂಪರ್ ಲಾಭವನ್ನು ಹೇಗಾದರೂ ಮಾಡಿ ನಿರಂತರವಾಗಿ ತಮ್ಮದಾಗಿಸಿಕೊಳ್ಳಲು ಅವರಿಗೆ ಅಡ್ಡಿಯಾಗಿರುವ ಎಲ್ಲವನ್ನೂ ತೊಲಗಿಸಲು ಇಲ್ಲವೇ ದಮನಿಸಿ ಇಡಲು ತೊಡಗಿದ್ದಾರೆ. ಮೋದಿ ಮಾಡಿದ ನೋಟು ರದ್ದತಿ ಕೂಡ ಇದರ ಭಾಗವೇ ಆಗಿದೆ. ಇದರ ಮೂಲಕ ನೇರವಾಗಿ ಜನಸಾಮಾನ್ಯರ ಜೇಬಿಗೇ ಕೈ ಹಾಕಿ ಬರಿದು ಮಾಡಿದ್ದನ್ನು ನಾವು ನೋಡಬಹುದು. ಅದರಲ್ಲೂ ಮಧ್ಯಮವರ್ಗದ ಉಳಿತಾಯಗಳ ಮೇಲೆಯೇ ನೇರ ಗದಾ ಪ್ರಹಾರ ನಡೆಯಿತು. ದೊಡ್ಡ ಮಟ್ಟದಲ್ಲಿ ನಿಜವಾದ ಕಪ್ಪುಹಣ ಮತ್ತು ಅಕ್ರಮ ಆಸ್ತಿಯನ್ನು ಇಟ್ಟುಕೊಂಡಿರುವವರ ಮೇಲೆ ಯಾವ ಕ್ರಮವೂ ಜರುಗದಿರುವುದನ್ನು ನಾವು ಗಮನಿಸಬಹುದು. ಮಲ್ಯ, ನೀರವ್ ಮೋದಿಯಂತಹವರು ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದು ಲಂಡನ್‌ನಲ್ಲಿ ಆಶ್ರಯ ಪಡೆಯಲು ಸರಕಾರವೇ ಅನುವು ಮಾಡಿಕೊಟ್ಟಿದ್ದನ್ನು ನಾವು ಗಮನಿಸಬೇಕು. ಅದಕ್ಕಾಗಿಯೇ ಸಂವಿಧಾನದ ಬಗ್ಗೆ, ಒಕ್ಕೂಟ ತತ್ವದ ಬಗ್ಗೆ, ಅವರಿಗೆ ತಡೆಯೆನಿಸುತ್ತಿರುವ ಹತ್ತುಹಲವು ಹಾಲಿ ಕಾನೂನುಗಳ ಬಗ್ಗೆ ಅವರು ತೀವ್ರ ಅತೃಪ್ತಿ ಹೊಂದಿದ್ದಾರೆ. ಯಾಕೆಂದರೆ ಅವರ ಈಗಿನ ಅಗತ್ಯಗಳಿಗೆ ಅವೆಲ್ಲಾ ತಡೆಗಳಾಗಿ ಬಿಟ್ಟಿವೆ. ಅವನ್ನೆಲ್ಲಾ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಿದ್ದಾರೆ.

ಒಂದೇ ಕೇಂದ್ರಾಡಳಿತದಡಿ ಇಡೀ ದೇಶವನ್ನು ಹಿಡಿದಿಟ್ಟುಕೊಂಡು ನೇರವಾಗಿ ಇಲ್ಲವೇ ಪರೋಕ್ಷವಾಗಿ ಜನಸಾಮಾನ್ಯರಿಗೆ ಇದುವರೆಗೂ ಅಲ್ಪಮಟ್ಟದಲ್ಲಿ ಇದ್ದ ಯಾವುದೇ ಸ್ವಾತಂತ್ರ ಮತ್ತು ಹಕ್ಕುಗಳಿರದ ನಿರಂಕುಶವಾದಂತಹ ಒಂದು ಆಡಳಿತ ವ್ಯವಸ್ಥೆಯೊಂದನ್ನು ಜನಸಾಮಾನ್ಯರ ಮೇಲೆ ಹೇರುವ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯಕ್ಕಾಗಲೀ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಲೀ ಅವಕಾಶ ಇರಕೂಡದೆಂಬುದು ಅವರ ಬಯಕೆಯಾಗಿದೆ. ಅದಕ್ಕಾಗಿ ಕಾರ್ಪೊರೇಟುಗಳೇ ಮಾಧ್ಯಮ ಸಂಸ್ಥೆಗಳ ಮೇಲೆ ಏಕಸ್ವಾಮ್ಯ ಸಾಧಿಸುವುದು ಒಂದೆಡೆಯಾದರೆ ಸ್ವತಂತ್ರ ಮಾಧ್ಯಮ ಸಂಸ್ಥೆಗಳನ್ನು ಮತ್ತು ಸ್ವತಂತ್ರ ಪತ್ರಕರ್ತರನ್ನು ಯಾವುದಾದರೂ ನೆಪದಲ್ಲಿ ನಿಷ್ಕ್ರಿಯಗೊಳಿಸುವ ಇಲ್ಲವೇ ಮುಗಿಸಿಬಿಡುವ ಕಾರ್ಯಗಳು ಬಿರುಸಾಗಿರುವುದನ್ನು ನಾವು ಗಮನಿಸಬಹುದು. ಕರ್ನಾಟಕದ ಜನಪರ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಇದಕ್ಕೊಂದು ಉದಾಹರಣೆಯಾಗಿದೆ.

ಅವರನ್ನು ಪ್ರಶ್ನಿಸಲಾಗದ, ಕಾನೂನುಗಳಿಂದಲೂ ಅವರನ್ನು ತಡೆಯಲಾಗದ, ಜನರು ಸಂಘಟಿಸಿಕೊಂಡು ಅವರ ವಿರುದ್ಧ ಹೋರಾಟಗಳಲ್ಲಿ ತೊಡಗಲಾಗದಂತಹ ಒಂದು ಅನುಕೂಲ ಆಡಳಿತ ವ್ಯವಸ್ಥೆಯನ್ನು ತರಬೇಕೆಂಬುದು ಅವರ ಬಯಕೆಯಾಗಿದೆ. ತಮಿಳುನಾಡಿನ ತೂತ್ತುಕುಡಿಯಲ್ಲಿ ವೇದಾಂತದ ಸ್ಟರ್ಲೈಟ್ ಇಂಡಸ್ಟ್ರೀಸ್ ಮಾಡುತ್ತಿದ್ದ ಪರಿಸರಹಾನಿ ಮತ್ತು ಪ್ರಾಣಹಾನಿಗಳ ವಿರುದ್ಧ ಹೋರಾಟಗಳಲ್ಲಿ ಜನರನ್ನು ಸಂಘಟಿಸುತ್ತಿದ್ದವರನ್ನು ಗುರಿಮಾಡಿ, ಜನರು ನಡೆಸುತ್ತಿದ್ದ ರ್ಯಾಲಿಯ ಸಂದರ್ಭದಲ್ಲೇ ಕಾನೂನುಗಳನ್ನೆಲ್ಲಾ ಗಾಳಿಗೆ ತೂರಿ ಗುಂಡಿಟ್ಟು ಕೊಲೆ ಮಾಡಿರುವುದನ್ನು ನಾವು ಸರಿಯಾಗಿ ಗ್ರಹಿಸಿದರೆ ಪರಿಸ್ಥಿತಿಯ ಕರಾಳತೆ ಅರಿವಾಗಬಹುದು. ಅಂತಹ ಒಂದು ವ್ಯವಸ್ಥೆ ಸಂವಿಧಾನದ ಹೆಸರಿನಲ್ಲಾಗಲೀ, ಚುನಾಯಿತ ಸರಕಾರದ ಹೆಸರಿನಲ್ಲಾಗಲೀ, ಇಲ್ಲವೇ ಬ್ರಾಹ್ಮಣಶಾಹಿ ಹಿಂದೂ ಧರ್ಮದ ಹೆಸರಿನಲ್ಲಾಗಲೀ ಜಾರಿಗೆ ತರುವ ಹವಣಿಕೆ ನಡೆಸುತ್ತಿದ್ದಾರೆ.

ಕಾರ್ಪೊರೇಟುಗಳಿಗೆ ಅಗತ್ಯವಾಗಿರುವ ನೋಟು ಅಮಾನ್ಯ, ಬಹು ಗುಣಿತ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಜನರ ಮೇಲೆ ನೇರ ನಿಗಾ ಇರಿಸಿ ಖಾಸಗಿತನವನ್ನು ಕಸಿಯುತ್ತಿರುವ ಆಧಾರ್ ಕಡ್ಡಾಯಗೊಳಿಸುವಿಕೆ, ಬ್ಯಾಂಕುಗಳಲ್ಲಿನ ಜನರ ಠೇವಣಿಗಳನ್ನು ಸರಕಾರ ಬಯಸಿದಲ್ಲಿ ನೇರವಾಗಿ ಉಪಯೋಗಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಎಫ್‌ಆರ್‌ಡಿಐ ಕಾಯ್ದೆ, ಕಾರ್ಪೊರೇಟುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಂಪೆನಿಗಳನ್ನು ಮುಚ್ಚಿ ಸಂಪತ್ತು ಕೊಳ್ಳೆಹೊಡೆಯಲು ಅನುಕೂಲ ಮಾಡಿಕೊಡುವ ಹೊಸ ಕಂಪೆನಿ ದಿವಾಳಿ ಕಾಯ್ದೆ (insolvency act), ಕಾರ್ಪೊರೇಟುಗಳಿಗೆ ಎಲ್ಲಿ ಬೇಕಾದರೂ ಎಷ್ಟು ಬೇಕಾದರೂ ಭೂಮಿ ವಶಪಡಿಸಿಕೊಡಲು ಅನುಕೂಲ ಕಲ್ಪಿಸುವ ಹೊಸ ಭೂ ಸ್ವಾಧೀನ ಕಾಯ್ದೆ, ಕಾರ್ಮಿಕರಿಗೆ ಮತ್ತು ನೌಕರರಿಗೆ ನೀಡಬೇಕಿದ್ದ ಉದ್ಯೋಗ ಭದ್ರತೆಯನ್ನು ತೆಗೆದುಹಾಕಿ; ಅದರ ಜಾಗದಲ್ಲಿ ನಿಗದಿತ ಅವಧಿಗೆ ಮಾತ್ರ ಕೇವಲ ಗುತ್ತಿಗೆಯಾಧಾರಿತ ಕಾರ್ಮಿಕರು ಮತ್ತು ನೌಕರರನ್ನಾಗಿ ಮಾಡುವ ‘ಫಿಕ್ಸ್‌ಡ್ ಟರ್ಮ್ ಎಂಪ್ಲಾಯ್ಮೆಂಟ್’ ಮೊದಲಾದ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇವುಗಳೆಲ್ಲದರ ರೂಪುರೇಷೆಗಳನ್ನು ತಯಾರು ಮಾಡಿ ಇಟ್ಟಿದ್ದು ಹಿಂದಿನ ಪ್ರಧಾನಿ ಕಾಂಗ್ರೆಸ್‌ನ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರಕಾರ ಎನ್ನುವುದು ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ವಿಚಾರ. ಜೊತೆಗೆ ದಲಿತ ದಮನಿತರಿಗೆ ಒಂದು ಮಟ್ಟದ ಭದ್ರತೆ ಕಲ್ಪಿಸಿದ್ದ ಎಸ್ಸಿ, ಎಸ್ಟಿ ದೌರ್ಜನ್ಯ ವಿರೋಧಿ ಕಾಯ್ದೆ ಹಾಗೂ ಮೀಸಲಾತಿ ಸೌಲಭ್ಯಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷ ವಿಧಾನಗಳಿಂದ ಸಡಿಲಗೊಳಿಸುವುದು ಇಲ್ಲವೇ ಕಿತ್ತುಕೊಳ್ಳುವ ಕಾರ್ಯಗಳು ಬಿರುಸುಗೊಂಡಿರೋದನ್ನು ನಾವು ಕಾಣಬಹುದು. ಈ ಎಲ್ಲಾ ಬೆಳವಣಿಗೆಗಳು ಬಿಡಿಬಿಡಿ ಘಟನೆಗಳನ್ನಾಗಿ ನಾವು ನೋಡಲು ಸಾಧ್ಯವಿಲ್ಲ. ಇವೆಲ್ಲವೂ ಆಳುವ ಶಕ್ತಿಗಳಿಗೆ ಯಾವುದೇ ಲಂಗು ಲಗಾಮಿಲ್ಲದಂತಹ ಒಂದು ನಿರಂಕುಶ ವ್ಯವಸ್ಥೆಯೊಂದನ್ನು ಜನರ ಮೇಲೆ ಹೇರುವ ಭಾಗವಾಗಿಯೇ ನಡೆಯುತ್ತಿದೆ. ಅದನ್ನೇ ಫ್ಯಾಶಿಸ್ಟ್ ವ್ಯವಸ್ಥೆ ಎನ್ನುವುದು.

ತನ್ನ ಆಡಳಿತದ ನಾಲ್ಕು ವರ್ಷಗಳಲ್ಲಿ ಮೋದಿ ಹೇಳುತ್ತಾ ಬಂದಿರುವುದು ಹಸಿಸುಳ್ಳುಗಳು ಮತ್ತು ಬಿತ್ತಿರುವುದು ಹುಸಿ ಭ್ರಮೆಗಳು ಎನ್ನುವುದು ಜನರಿಗೆ ಅರ್ಥವಾಗತೊಡಗಿದೆ. ಈಗ ಮೊದಲಿನಂತೆ ಮೋದಿಯ ಬಿಜೆಪಿ ಸರಕಾರವನ್ನು ಜನರು ಆದರಿಸುತ್ತಿಲ್ಲ. ಮೋದಿಯನ್ನು ಹೆಚ್ಚು ಆಧರಿಸಿದ ಮಧ್ಯಮವರ್ಗ ಇದೀಗ ಭ್ರಮನಿರಸನಗೊಳ್ಳತೊಡಗಿದೆ. ಈಗ ಆಳುವ ಶಕ್ತಿಗಳು ಮುಂಬರುವ ಹೊಸ ರಾಜಕೀಯ ಅಧಿಕಾರದ ಸಾಧ್ಯತೆಗಳನ್ನು ನೋಡುತ್ತಿವೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News