ಮಕ್ಕಳಿಗೆ ಪಾಕೆಟ್ ಮನಿ ಕೊಡುವ ಪರಿಪಾಠ ಬೆಳೆಸಿ

Update: 2018-06-15 13:25 GMT

ಪೆರ್ನಾಳ್ ಅಂದರೆ ಮಕ್ಕಳಿಗೆ ಅದರಲ್ಲೂ ಎಳೆಯ ಮಕ್ಕಳಿಗೆ ಹಣದ ಮೇಲೆ ಆಸೆ ಇದ್ದೇ ಇರುತ್ತದೆ. ಹಾಗಾಗಿ ಪೆರ್ನಾಳ್‌ನಂದು ನೆರೆಹೊರೆ, ಕುಟುಂಬಸ್ಥರ ಮನೆಗೆ ಹೋದಾಗ ಅಲ್ಲಿರುವ ಮಕ್ಕಳು ಹಿರಿಯರ ಪಾಕೆಟ್‌ನತ್ತ ಕಣ್ಣಿಡುವುದು ಸಹಜ. ಅವರು ಹಣ ಕೇಳುವ ಮುನ್ನವೇ 50 ಅಥವಾ 100 ರೂಪಾಯಿ ಕೊಡುವುದು ಒಳ್ಳೆಯದು. ಹಾಗೇ ಕೊಟ್ಟರೆ ಆ ಮಕ್ಕಳಿಗೆ ಸಿಗುವ ಸಂತಸಕ್ಕೆ ಪಾರವಿಲ್ಲ. ಈ ಪದ್ಧತಿ ಹೊಸತೇನೂ ಅಲ್ಲ,ನಾವು ಸಣ್ಣದಿರುವಾಗಲೂ ಹೀಗೆ ದೊಡ್ಡವರು ಸಣ್ಣ ಮಕ್ಕಳಿಗೆ ಹಣ ಕೊಡುತ್ತಿದ್ದರು. ಅದು ಮುಂದಿನ ಪೀಳಿಗೆಗೂ ಮುಂದುವರಿಯಬೇಕು.

ಅಂದಹಾಗೆ, ಮಕ್ಕಳಿಗೆ ಹಣ ಕೊಡುವಾಗ ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಮಾತ್ರ ಕೊಡಬೇಡಿ. ಶ್ರೀಮಂತರ ಮಕ್ಕಳಿದ್ದರೂ ಅವರಿಗೂ ಕೊಡಿ. ಯಾಕೆಂದರೆ ಮಕ್ಕಳಲ್ಲಿ ಬಡವ-ಶ್ರೀಮಂತ ಎಂಬ ಭೇದ ಭಾವವಿರುವುದಿಲ್ಲ. ಇನ್ನು ಪೆರ್ನಾಳ್ ದಿನದಂದು ಕುಟುಂಬ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಬೇಕು. ಕುಟುಂಬದ, ನೆರೆಕರೆಯ ಎಲ್ಲಾ ಮನೆಗಳಿಗೂ ತಪ್ಪದೆ ಭೇಟಿ ನೀಡಬೇಕು.

ಇನ್ನು ನಿಮ್ಮ ಮೇಲೆ ಯಾರಿಗೆ ಹೆಚ್ಚು ಸಿಟ್ಟು ಇದೆಯೋ ಅವರ ಮನೆ ಹುಡುಕಿಕೊಂಡು ಹೋಗಿ ಹಬ್ಬದಶುಭಾಶಯ ಸಲ್ಲಿಸಬೇಕು. ತಿಂಡಿ-ತಿನಿಸು ಹಂಚಿ ಹಳೆಯ ಕಹಿ ಘಟನೆಯನ್ನು ಮರೆತು ವಿಶೇಷ ಪ್ರಾರ್ಥನೆ ಮಾಡಲು ಹೇಳಿ ಬರಬೇಕು.

ಮನೆಯಲ್ಲಿ ಹಿರಿಯರಿದ್ದರೆ ಅವರನ್ನು ಕಂಡು ಮಾತನಾಡಿಸಬೇಕು, ಅವರಿಗೂ ಹಣ ನೀಡಿ ಖುಷಿಪಡಿಸಬೇಕು, ಅವರು ಬೀಡಾ ತಿನ್ನಲಿ, ಬೀಡಿ ಎಳೆಯಲಿ. ಅದನ್ನೂ ಹೋಗುವಾಗ ಕೊಂಡೊಯ್ಯಬೇಕು. ಮಕ್ಕಳು ಮಾತ್ರವಲ್ಲ, ಮೊಮ್ಮಕ್ಕಳು ಕೂಡಾ ಅಜ್ಜ-ಅಜ್ಜಿಯಂದಿರನ್ನು ಪೆರ್ನಾಳ್‌ನಂದು ಖುಷಿಪಡಿಸುವ ಮನಸ್ಸು ಮಾಡಬೇಕು. ಕೇವಲ ನಾವು ಮಾತ್ರ ಒಳ್ಳೆಯ ಬಟ್ಟೆಬರೆ, ಹೊಟ್ಟೆ ತುಂಬಾ ತಿಂದು ಖುಷಿಪಟ್ಟರೆ ಸಾಲದು. ನಮ್ಮ ಮನೆಯ ಕಿರಿಯರು, ಹಿರಿಯರನ್ನೂ ಖುಷಿಪಡಿಸಬೇಕು.

 ಅಬ್ದುರ್ರವೂಫ್ ಪುತ್ತಿಗೆ

ಸ್ಥಾಪಕಾಧ್ಯಕ್ಷರು, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News